ಚಂದ್ರವನ ಆಶ್ರಮದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

SRP_16-02jpg
Published on

ಶ್ರೀರಂಗಪಟ್ಟಣ: ಚಂದ್ರವನ ಆಶ್ರಮದಲ್ಲಿ ನವರಾತ್ರಿ ಉತ್ಸವಕ್ಕೆ ಪೀಠಾಧ್ಯಕ್ಷ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ ಸಿಕ್ಕಿತು.


ಪಟ್ಟಣದ ಹೊರವಲಯದ ಪೂರ್ವವಾಹಿನಿಯ ಕಾವೇರಿ ತೀರದ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ದುರ್ಗಾದೇವಿಯ ಕೃಪೆ ಮತ್ತು ಹಿರಿಯ ಶ್ರೀಗಳ ಆಶೀರ್ವಾದದಿಂದ ನವರಾತ್ರಿ ಉತ್ಸವವನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಶ್ರಮದ ಆಚರಣೆ, ರಾಷ್ಟ್ರ, ನಾಡು, ಸಮಾಜ ಹಾಗೂ ಸಮಾಜದ ಭಕ್ತರ ಹಿತಕ್ಕಾಗಿ ಸಮರ್ಪಿತವಾಗಿ ತಮ್ಮ ಈ ಕೆಲಸ ತೃಪ್ತಿ ತಂದುಕೊಟ್ಟಿದೆ ಎಂದರು.


ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ ನವರಾತ್ರಿ ಉತ್ಸವವನ್ನು ಸಮಾಜದ ಒಳಿತಿಗಾಗಿ ಆಚರಿಸುತ್ತಿದ್ದಾರೆ. ಪ್ರಸ್ತುತ ಸ್ವಾರ್ಥ ತುಂಬಿರುವ ಸಮಾಜದಲ್ಲಿ ಶ್ರೀಗಳು ಸಾಮಾಜಿಕ ಕಳಕಳಿ ಹೊಂದಿರುವುದು ಶ್ಲಾಘನೀಯ ಎಂದರು.


ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಾಡಿನ ಒಳಿತಿಗಾಗಿ ಶ್ರೀಗಳು ನವರಾತ್ರಿ ಪೂಜಾ ಕೈಂಕರ್ಯ ಕೈಗೊಂಡಿರುವುದು ಉತ್ತಮ ಕಾರ್ಯ ಎಂದು ಹೇಳಿದರು.


ಬೊಮ್ಮನಹಳ್ಳಿ ಶ್ರೀ ಸಿದ್ಧರಹಳ್ಳಿ ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಕೆ.ಪಿ.ಚಂದ್ರಕಲಾ, ಆಶ್ರಮದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net