ಜಿಲ್ಲೆಯಾದ್ಯಂತ ನವರಾತ್ರಿ ಸಂಭ್ರಮ

udp-22-navaratri 1
Published on

ಉಡುಪಿ: ಜಿಲ್ಲೆಯಾದ್ಯಂತ ಶಕ್ತಿ ದೇವತೆ ಆರಾಧನೆ ನವರಾತ್ರಿ ಹಬ್ಬದ ಸಂಭ್ರಮ ಸೋಮವಾರದಿಂದ ಪ್ರಾರಂಭವಾಗಿದೆ. ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರು ಸರಿತಿ ಸಾಲಿನಲ್ಲಿ ದೇವಿಯ ದರ್ಶನ ಪಡೆದರು.

ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನ, ಅಂಬಲಪಾಡಿ ಮಹಾಕಾಳಿ ಜನಾರ್ದನ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ನೀಲಾವರ ಮಹಿಷಮರ್ಧಿನಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು, ಚಂಡಿಕಾ ಹೋಮ ನೆರವೇರಿತು. ಮಧ್ಯಾಹ್ನ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ನವರಾತ್ರಿಯ ಪ್ರಯುಕ್ತ ಪುತ್ತಿಗೆ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಕುಂಜಾರುಗಿರಿಯ ಕುಬ್ಜ ಕುವರಿ ಅಲಂಕಾರ ಮಾಡಿದ್ದರು.

ಕದಿರುಕಟ್ಟುವ ಕಾರ್ಯ

ನವರಾತ್ರಿ ಪರ್ವಕಾಲದಲ್ಲಿ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತೆನೆ ಕಟ್ಟುವ ಹಬ್ಬ ವಿಜೃಂಭಣೆಯಿಂದ ನಡೆಯಿತು. ತೆನೆಯನ್ನು ದೇವಳದಲ್ಲಿ ಪೂಜೆ ಮಾಡಿ ಸಾರ್ವಜನಿಕರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ. ಉಪಾಧ್ಯಾಯ, ಮುರಳಿಧರ ನಕ್ಷತ್ರಿ, ಮಂಜುನಾಥ ಉಪಾಧ್ಯಾಯ, ನಟರಾಜ್​ ಪರ್ಕಳ, ಸುಧಾಕರ್​ ಪೂಜಾರಿ, ಕೀರ್ತಿ ಮೊದಲಾದವರಿದ್ದರು. ಪರ್ಕಳ, ಮಣಿಪಾಲ, ಸರಳಬೆಟ್ಟು ಬಡಗಬೆಟ್ಟು ಸುತ್ತ್ತಮುತ್ತಲಿನ ತೆನೆಯನ್ನು ಪಡೆದುಕೊಂಡರು.

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮೊದಲ ದಿನ ನವರಾತ್ರಿಯ ಅಂಗವಾಗಿ ಗದ್ದೆಯಿಂದ ಕದಿರು ಭತ್ತದ ತೆನೆಯನ್ನು ಪಲ್ಲಕಿಯಲ್ಲಿ ತಂದು ದೇವಳದಲ್ಲಿ ಧಾನ್ಯಲಕ್ಷಿ$್ಮ ಪೂಜೆ ಸಲ್ಲಿಸಿ ನೆರೆದ ಭಕ್ತರಿಗೆ ವಿತರಣೆ ಮಾಡಲಾಯಿತು. ಅರ್ಚಕ ಜಯದೇವ ಭಟ್​ ಧಾರ್ಮಿಕ ಪೂಜಾ ಕಾರ್ಯ ನೆಡೆಸಿಕೊಟ್ಟರು. ಉಡುಪಿ ಶ್ರೀ ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನದಲ್ಲಿಯೂ ನವರಾತ್ರಿ ಪ್ರಥಮ ದಿನವಾದ ಸೋಮವಾರ ಕದಿರುಕಟ್ಟುವ ಕಾರ್ಯ ಸಕಲ ಧಾರ್ಮಿಕ ವಿದಿವಿಧಾನಗಳೊಂದಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net