

ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಕ್ಟೋಬರ್ 3ರಿಂದ 12ರವರೆಗೆ ನವರಾತ್ರಿ ಉತ್ಸವ ಜರುಗಲಿದೆ. ಹಾರ್ನಾಡು ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳೊಂದಿಗೆ ಉತ್ಸವ ನಡೆಯಲಿದೆ.
3ರಂದು ಬೆಳಗ್ಗೆ 11ಕ್ಕೆ ಶ್ರೀಕ್ಷೇತ್ರದ ಪಾತ್ರಿ ಪಾಂಗೋಡು ಪ್ರವೀಣ ನಾಯಕ್ ದೀಪ ಪ್ರಜ್ವಲನಗೊಳಿಸುವರು. ಕಾಸರಗೋಡಿನ ಮಲ್ಲಿಕಾರ್ಜುನ ಕ್ಷೇತ್ರದ ಆಡಳಿತ ಸಮಿತಿ ಸದಸ್ಯ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾ.ಗಣೇಶ ಕಾರ್ಣಿಕ್ ಉದ್ಘಾಟಿಸುವರು. ಕೋಟೆ ವೀರಾಂಜನೇಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ. ಅನಂತ ಕಾಮತ್ ಗೌರವ ಉಪಸ್ಥಿತರಿರುವರು. ಉದ್ಯಮಿ ರಾಮ್ ಪ್ರಸಾದ್, ಬಿಜೆಪಿಯ ಡಾ.ಮಂಜುಳಾ ಅನಿಲ್ ರಾವ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಧಾರ್ಮಿಕ ಮುಖಂಡ ಅರಿಬೈಲ್ ಗೋಪಾಲ ಶೆಟ್ಟಿ, ಶ್ರೀಧರ ಶೆಟ್ಟಿ ಮುಟ್ಟಂ, ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು, ಶಿಕ್ಷಣ ತಜ್ಞ ವಿಶಾಲಾಕ್ಷ ಪುತ್ರಕಳ ಮೊದಲಾದವರು ಭಾಗವಹಿಸುವರು.
ಜಯಾನಂದ ಕುಮಾರ್ ಹೊಸದುರ್ಗ ಸಾರಥ್ಯದಲ್ಲಿ 11ನೇ ವರ್ಷದ ದಸರಾ ಸಂಕೀರ್ತನಾ ದಶಾಹ ಉದ್ಘಾಟನೆಗೊಳ್ಳುವುದು. ಧಾರ್ಮಿಕ ಮುಂದಾಳು ಸವಿತಾ ಶುಭಾಶಂಸನೆ ಮಾಡುವರು. ಉತ್ಸವದ ಅಂಗವಾಗಿ ಪ್ರತಿದಿನ ವಿವಿಧ ಭಜನಾ ತಂಡಗಳಿಂದ ಭಜನೆ, ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.