

ಆದಿಶಕ್ತಿಯ ನವವಿಧ ರೂಪಗಳಲ್ಲಿ ಆರನೆಯ ರೂಪವೇ ಕಾತ್ಯಾಯನೀ. ವರರುಚಿ ಮಹರ್ಷಿಗಳು ವಿಶ್ವಾಮಿತ್ರರ ಕಾತ್ಯ ವಂಶ, ಗೋತ್ರದಲ್ಲಿ ಜನಿಸಿದ್ದರಿಂದ, ಅವರನ್ನು ಕಾತ್ಯಾಯನ ಎಂದು ಕರೆಯುತ್ತಾರೆ. ಇವರು ಒಮ್ಮೆ ದೇವಿಯು ತಮ್ಮ ಮಗಳಾಗಿ ಜನಿಸಬೇಕೆಂಬ ಸಂಕಲ್ಪದಿಂದ ಘೊರ ತಪಸ್ಸನ್ನು ಕೈಗೊಂಡರು. ಪ್ರತಿಫಲವಾಗಿ ವರವನ್ನು ಪಡೆದರು. ಕಾತ್ಯಾಯನರ ಪುತ್ರಿಯಾಗಿ ಜನಿಸಿದ ದೇವಿ ಕಾತ್ಯಾಯನೀ ಎಂದು ಪ್ರಸಿದ್ಧಳಾದಳು.
ಮಹಿಷಾಸುರನ ಕಾಟ ತಾಳಲಾರದೆ ಋಷಿ-ಮುನಿಗಳು ದೇವಿಯನ್ನು ಸಹಾಯಕ್ಕೆಂದು ಪ್ರಾರ್ಥಿಸಿದರು. ಆ ಸಮಯದಲ್ಲಿ ಪ್ರತಿಯೊಬ್ಬ ದೇವತೆಯೂ ತನ್ನ ವಿಶೇಷ ಶಕ್ತಿ ಅಥವಾ ಆಯುಧವನ್ನು ದೇವಿಗೆ ನೀಡಿದರು. ಆಕೆಯ ವಿಶೇಷ ರೂಪವನ್ನು ಕಾತ್ಯಾಯನ ಋಷಿ ಮೊದಲು ಆರಾಧಿಸಿದ್ದರಿಂದ ದೇವಿಯನ್ನು ಕಾತ್ಯಾಯನಿ ಎಂದು ಕರೆದರು ಎಂದು ಇನ್ನೊಂದು ವಾದ. ಭಾದ್ರಪದ ಕೃಷ್ಣ ಚತುರ್ದಶಿಯಂದು ಈಕೆ ಅವತರಿಸಿ, ಆಶ್ವಯುಜ ಶುಕ್ಲ ಸಪ್ತಮಿ, ಅಷ್ಟಮಿ, ನವಮಿ- ಈ ಮೂರು ದಿವಸಗಳ ಕಾಲ ಕಾತ್ಯಾಯನ ಮಹರ್ಷಿಗಳ ಪೂಜೆಯನ್ನು ಸ್ವೀಕರಿಸಿ, ದಶಮಿಯಂದು ಮಹಿಷಾಸುರನನ್ನು ಸಂಹರಿಸಿದಳು.
ನವರಾತ್ರಿಯ ಆರನೇ ದಿವಸ ಷಷ್ಠೀ ತಿಥಿಯಂದು ಕಾತ್ಯಾಯನೀ ಪೂಜೆ ನಡೆಯುತ್ತದೆ. ಅದರಿಂದ ಸಾಧಕನ ಮನಸ್ಸು ಆಜ್ಞಾಚಕ್ರದಲ್ಲಿ ನೆಲೆಸಲು ಸಾಧ್ಯವಾಗುತ್ತದೆ. ಭಕ್ತನು ಚತುರ್ವಿಧ ಪುರುಷಾರ್ಥಗಳನ್ನು ಹೊಂದುತ್ತಾನೆ.
ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾತ್ ದೇವೀ ದಾನವಘಾತನೀ ||
‘ದೇವೀ ಕಾತ್ಯಾಯನಿ ಮಂದಹಾಸದ ಮುಖಾರವಿಂದದಿಂದ ಕೂಡಿದ್ದು, ಶಾರ್ದೂಲದ ಮೇಲೆ ಆಸೀನಳಾಗಿದ್ದಾಳೆ. ಹೇ ದೇವೀ, ದಾನವರನ್ನು
ಸಂಹಾರ ಮಾಡಿರುವವಳೇ, ಶುಭವನ್ನು ನೀಡುವ ಜಗನ್ಮಾತೆಯೇ!
ನಿನಗೆ ನನ್ನ ಅನಂತಕೋಟಿ ಪ್ರಣಾಮಗಳು’.
ಏಕವೇಣೀ ಜಪಾಕರ್ಣಾಪೂರಾ ನಗ್ನಾ ಖರಸ್ಥಿತಾ
ಲಂಬೋಷ್ಟೀ ಕರ್ಣಿಕಾಕರ್ಣೆ ತೈಲಾಭ್ಯಕ್ತಶರೀರಿಣೀ |
ವಾಮಪಾದೋಲ್ಲಸಲ್ಲೋಹಲತಾ ಕಂಟಕಭೂಷಣಾ
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ||
ಈ ದೇವಿಯ ಶರೀರ ಕಪ್ಪುಬಣ್ಣದಿಂದ ಕೂಡಿರುವುದು. ಆಕೆಯ ತಲೆಕೂದಲು ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುವ ಮಾಲೆಯಿದೆ. ಮೂರು ಕಣ್ಣುಗಳನ್ನು ಹೊಂದಿರುವ ಈ ದೇವಿಯ ಉಚ್ಛಾ ್ವ, ನಿಃಶ್ವಾಸದಿಂದ ಅಗ್ನಿಯ ಭಯಂಕರ ಜ್ವಾಲೆಗಳು ಹೊರಸೂಸುತ್ತಿವೆ. ಈಕೆಯ ವಾಹನ ಕತ್ತೆ. ನಾಲ್ಕು ಭುಜಗಳಿರುವ ದೇವಿ ಮೇಲಕ್ಕೆ ಎತ್ತಿರುವ ಬಲಗೈಯಿಂದ ಅಭಯಮುದ್ರೆ ತೋರುತ್ತಿದ್ದಾಳೆ. ಮೇಲಕ್ಕೆ ಎತ್ತಿರುವ ಎಡಗೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳ ಎಡಗೈಯಲ್ಲಿ ಖಡ್ಗವನ್ನು ಹಿಡಿದಿದ್ದಾಳೆ. ಕೆಳಗಿನ ಬಲಗೈಯಲ್ಲಿ ವರಮುದ್ರೆ ಮೂಲಕ ಭಕ್ತರಿಗೆ ಆಶೀರ್ವದಿಸುತ್ತಿದ್ದಾಳೆ. ಇವಳು ಶುಭಫಲ ನೀಡುವವಳಾದ್ದರಿಂದ ಶುಭಂಕರೀ ಎಂದೂ ಕರೆಯುತ್ತಾರೆ. ಭಕ್ತರಿಗೆ, ಸಜ್ಜನರಿಗೆ ಒಳ್ಳೆಯದನ್ನು ಮಾಡುತ್ತ, ದುಷ್ಟ ಜನರನ್ನು ಈ ದೇವಿ ಶಿಕ್ಷಿಸುತ್ತಾಳೆ.
ದೇವಿ ಕಾಲರಾತ್ರಿಯನ್ನು ಆರಾಧಿಸಿದರೆ, ಅಗ್ನಿಭಯ, ಶತ್ರುಭಯ, ಜಲಭಯ, ಗ್ರಹಗಳ ಬಾಧೆಗಳಿಂದ ಮುಕ್ತರಾಗುತ್ತಾರೆ. ಸಪ್ತಮೀ ತಿಥಿಯ ರಾತ್ರಿಯನ್ನು ಕಾಳರಾತ್ರೀ ಎಂದೂ ಕರೆಯುತ್ತಾರೆ. ಅಂದು ಸಾಧಕನ ಮನಸ್ಸು ಸಹಸ್ರಾರ ಚಕ್ರದಲ್ಲಿ ಪ್ರತಿಷ್ಠಿತಗೊಳ್ಳುತ್ತದೆ. ಬ್ರಹ್ಮಾಂಡದ ಸಕಲ ಸಿದ್ಧಿಗಳೂ ಅವನಿಗೆ ದೊರೆಯುತ್ತವೆ. ಸಾಧಕನ ಮನಸ್ಸು ಮಾತೆಯ ಸ್ವರೂಪದಲ್ಲಿ ಸ್ಥಿರವಾಗುತ್ತದೆ.