

ಮಂಡ್ಯ: ನಗರದ ಶಂಕರಪುರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶರನ್ನವರಾತ್ರಿಯ ಕಾರ್ಯಕ್ರಮ ಮಂಗಳವಾರ ವಿಧುಕ್ತವಾಗಿ ಆರಂಭವಾಯಿತು. ಶರನ್ನವರಾತ್ರಿ ಅಂಗವಾಗಿ ಈಶ್ವರ, ಗಣಪತಿ ಹಾಗೂ ಶಕ್ತಿ ದೇವತೆ ಪಾರ್ವತಿ ದೇವರಿಗೆ ವಿವಿಧ ಪೂಜಾ ಕಾರ್ಯಗಳು ನಡೆದವು.
ಆದಿಚುಂಚನಗಿರಿ ಕೊಮ್ಮೇರಹಳ್ಳಿಯ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ರಾಜ್ಯದ ಜನತೆ ಸುಖ, ಶಾಂತಿಯಿಂದ ನೆಲೆಸುವಂತೆ ಶಕ್ತಿ ದೇವತೆಯಾದ ದುರ್ಗೆಯನ್ನು ಪ್ರಾರ್ಥಿಸುವ ಶುಭ ನವರಾತ್ರಿ ಇದಾಗಿದೆ. ಒಂಬತ್ತು ದಿನ ಈಶ್ವರ, ಕಾಲಭೈರವೇಶ್ವರ ಹಾಗೂ ಪಾರ್ವತಿಗೆ ವಿವಿಧ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಮನುಷ್ಯನಿಗೆ ಶಾಂತಿ ನೆಮ್ಮದಿ ಆರೋಗ್ಯ ಅವಶ್ಯಕ. ದೈವದ ಮೊರೆ ಹೋಗುವುದು ಅನಿವಾರ್ಯ. ಜನರು ನೆಮ್ಮದಿಯಿಂದ ಬಾಳುವಂತಾಗಲು ದೈವ ಕೃಪೆ ಬಯಸಿ ಎಲ್ಲರೂ ದುರ್ಗಾದೇವಿಯನ್ನು ನವ ದಿನಗಳ ಕಾಲ ಆರಾಧನೆ ಮಾಡಬೇಕು. ಸಕಲ ಐಶ್ವರ್ಯಗಳು ದೊರಕಿ ಜನತೆ ಸುಖ ಶಾಂತಿಯಿಂದ ಬಾಳಲು ದೈವದ ಆಶೀರ್ವಾದವನ್ನು ಬೇಡುವುದು ಮನುಷ್ಯನ ಆದ್ಯ ಕರ್ತವ್ಯ ಎಂದು ಆಶಿಸಿದರು.
ನವರಾತ್ರಿಯ ಅಂಗವಾಗಿ ಗಾಯಕ ಬಸವರಾಜು ಮತ್ತು ಕಲಾಶ್ರೀ ಸಿ.ಪಿ.ವಿದ್ಯಾಶಂಕರ್ ತಂಡದವರಿಂದ ಭಕ್ತಿ ಸುಧಾ ಕಾರ್ಯಕ್ರಮ ನಡೆಯಿತು. ಏಕಾರತಿ ಪೂಜಾ ಕಾರ್ಯಕ್ರಮ ವೇದ ಮಂತ್ರ ಸಹಿತ ಆರಾಧನೆ ಮಾಡಲಾಯಿತು. ನೂರಾರು ಭಕ್ತರು ಭಾಗವಹಿಸಿ ದೈವಕೃಪೆಗೆ ಪಾತ್ರರಾದರು.