ವಿವಿಧ ದೇಗುಲಗಳಲ್ಲಿ ನವರಾತ್ರಿ ಪೂಜೆ

21 HRS 01
Published on

ಹಿರೀಸಾವೆ: ಇಲ್ಲಿನ ಗ್ರಾಮದೇವತೆ ಶ್ರೀ ಚೌಡೇಶ್ವರಿ, ಪುರದ ಶ್ರೀ ವೀರಭದ್ರೇಶ್ವರಸ್ವಾಮಿ, ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ, ಉಳ್ಳಾವಳ್ಳಿ ಶ್ರೀ ಹುಚ್ಚಮ್ಮದೇವಿ ಸೇರಿದಂತೆ ವಿವಿಧ ದೇಗುಲಗಳಲ್ಲಿ ನವರಾತ್ರಿ ಪ್ರಯುಕ್ತ ನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.

ಮುಂಜಾನೆಯೇ ದೇಗುಲದ ಆವರಣವನ್ನು ಭಕ್ತರು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸುವುದು ವಿಶೇಷವಾಗಿದೆ. ಪ್ರತಿದಿನ ಅರಿಶಿಣ-ಕುಂಕುಮ, ಬಳೆ, ಗಂಧ, ಬೆಣ್ಣೆ, ಫಲ-ಪುಷ್ಪಗಳಿಂದ ಅಲಂಕರಿಸಲಾಗುತ್ತಿದ್ದು, ಹೆಣ್ಣು ಮಕ್ಕಳು ಹಣ್ಣು-ಕಾಯಿ ಅರ್ಪಿಸುತ್ತಿದ್ದಾರೆ. ವಿಶೇಷ ಪೂಜಾ ಕೈಂಕರ್ಯಗಳ ಜತೆಗೆ ನೈವೇಧ್ಯ, ಪ್ರಸಾದ-ವಿನಿಯೋಗ ನಡೆಯುತ್ತಿದೆ.

ಹೋಬಳಿಯ ಪುರ ಗ್ರಾಮದಲ್ಲಿ ಪ್ರತಿದಿನ ರಾತ್ರಿ ಶ್ರೀ ವೀರಭದ್ರೇಶ್ವರಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ ಜರುಗುತ್ತಿದ್ದು, ಜಿನ್ನೇನಹಳ್ಳಿ ಗ್ರಾಮದ ಶ್ರೀ ಚೆನ್ನಕೇಶವ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ಆಚರಣೆಗೊಳ್ಳುತ್ತಿವೆ. ಅ.24ರ ರಾತ್ರಿ ಶ್ರೀ ಚೌಡೇಶ್ವರಿ ದಸರಾ ಮಹೋತ್ಸವ ಜರುಗಲಿದ್ದು, ಹೊಸಹಳ್ಳಿಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ಚಂದ್ರಮಂಡಲ ಉತ್ಸವ ನಡೆಯಲಿದೆ. ಬುಧವಾರ ಮುಂಜಾನೆ ಮಂಟಪದ ಬಳಿ ಬನ್ನಿಪೂಜೆ ಕೈಗೊಳ್ಳುವ ಮೂಲಕ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net