

ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಳ
ಕಮಲಶಿಲೆ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ_, ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರದಿಂದ ಆರಂಭಗೊಂಡಿದ್ದು, ಅ.26ರವರೆಗೆ ನಡೆಯಲಿದೆ.
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಆರಂಭಗೊಂಡಿತು. ಆನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಆನುವಂಶಿಕ ಟ್ರಸ್ಟಿಗಳಾದ ಬರೆಗುಂಡಿ ಶ್ರೀನಿವಾಸ ಚಾತ್ರ, ಆಜ್ರಿ ಚಂದ್ರಶೇಖರ ಶೆಟ್ಟಿ, ಮ್ಯಾನೇಜರ್ ಗುರು ಭಟ್, ಅರ್ಚಕ ವೃಂದ, ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.
ಅ.20ರಂದು ರಾತ್ರಿ ಶಾರದಾದೇವಿ ಪ್ರತಿಷ್ಠಾಪನೆ, 25ರಂದು ಮಧ್ಯಾಹ್ನ ಚಂಡಿಕಾಹವನ, ರಾತ್ರಿ ರಜತ ಮಹೋತ್ಸವ, ಲಾಲ್ಕಿ ಉತ್ಸವ, (ರಥಬೀದಿ ಮತ್ತು ರಾಜಬೀದಿ), 26ರಂದು ದಶಮಿ ಪೂಜೆ, ವಿಜಯೋತ್ಸವ, ಸಾಯಂಕಾಲ ದಶಮಿ ಉತ್ಸವ. ಪ್ರತಿದಿನ ಸಾಯಂಕಾಲ 6ರಿಂದ 8ರತನಕ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಬೆಳ್ಳಿ ರಥೋತ್ಸವ, ಅನ್ನಸಂತರ್ಪಣೆ ಸೇವೆಯಿದೆ.
ಕೋಟ ದೇವಳದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ
ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ಸನ್ನಿಧಾನದಲ್ಲಿ ಶರನ್ನವರಾತ್ರಿ ಉತ್ಸವ ಶನಿವಾರ ಆರಂಭಗೊಂಡಿದೆ.
ಮೊದಲ ದಿನದ ಚಂಡಿಕಾ ಸಪ್ತಶತೀ ಪಾರಾಯಣ ದುರ್ಗಾಯಾಗ ಕಾರ್ಯಕ್ರಮ ಮಧುಸೂದನ ಬಾಯಿರಿ ನೇತೃತ್ವದಲ್ಲಿ ನಡೆಯಿತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಟುಂಬದ ಪೂಜಾ ಕಾರ್ಯ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ.
ಸಚಿವರ ಪತ್ನಿ ಶಾಂತಾ, ಪುತ್ರ ಶಶಿಧರ, ಪುತ್ರಿಯರಾದ ಸ್ವಾತಿ, ಶತಿ ಕುಟುಂಬಿಕರೊಂದಿಗೆ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ.ಜಿ.ಸುಧಾಕರ್, ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಆನಂದ್ ಸಿ.ಕುಂದರ್, ಮಾಜಿ ಸದಸ್ಯರುಗಳಾದ ಚಂದ್ರ ಆಚಾರ್ಯ, ಚಂದ್ರ ಪೂಜಾರಿ, ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ, ಅರ್ಚಕರಾದ ಭಾಸ್ಕರ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ಕರೊನಾ ಪರಿಹಾರಕ್ಕೆ ತಮ್ಮ ಸಂಕಷ್ಟಗಳನ್ನು ಪರಿಹಾರಕ್ಕಾಗಿ ಭಕ್ತರು ಸಾಲು ಸಾಲಾಗಿ ಶರನ್ನವರಾತ್ರಿ ಮೊದಲ ದಿನ ದೇವಳದಲ್ಲಿ ಸೇರಿದ್ದು ವಿಶೇಷವಾಗಿ ಕಂಡುಬಂತು. ದೂರದ ಭಕ್ತರು ಹೆಚ್ಚಾಗಿ ಆಗಮಿಸಿದ್ದು ವಿಶೇಷವಾಗಿತ್ತು.
ಕೋಟ.ಅ.17 ಅಮತೇಶ್ವರಿ ನವರಾತ್ರಿ
ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ಸನ್ನಿದಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಮೊದಲ ದಿನದ ಚಂಡಿಕಾ ಸಪ್ತಶತೀ ಪಾರಾಯಣ ದುರ್ಗಾಯಾಗ ಕಾರ್ಯಕ್ರಮ ಮಧುಸೂದನ ಬಾಯಿರಿ ನೇತೃತ್ವದಲ್ಲಿ ನಡೆಯಿತು.
ಮಂದಾರ್ತಿಯಲ್ಲಿ ನವರಾತ್ರಿ ಉತ್ಸವ
ಮಂದಾರ್ತಿ: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಅ.17ರಿಂದ ನವರಾತ್ರಿ ಉತ್ಸವ ಆರಂಭಗೊಂಡಿದ್ದು, 26ರ ತನಕ ನವರಾತ್ರಿ ಉತ್ಸವ ಜರುಗಲಿದೆ. ಪ್ರತಿನಿತ್ಯ ಪೂಜೆ, ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, 22ರಂದು ಮೂಲನಕ್ಷತ್ರದ ಪ್ರಯುಕ್ತ ಚಂಡಿಕಾಯಾಗ, ವಿಜಯದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಗುತ್ಯಮ್ಮ ದೇವಳದಲ್ಲಿ ನವರಾತ್ರಿ ಉತ್ಸವ
ಕೊಕ್ಕರ್ಣೆ: ಬಳೆಗಾರಬೆಟ್ಟು ಬೈದೆಬೆಟ್ಟುವಿನ ಶ್ರೀ ಗುತ್ಯಮ್ಮ ದೇವಿ, ಶ್ರೀ ಕಲ್ಕುಡ ಸ್ವಾಮಿ, ಶ್ರೀ ಕಾಲಭೈರವ ಹಾಗೂ ಪರಿವಾರ ದೈವದೇವರುಗಳ ದೇವಸ್ಥಾನದಲ್ಲಿ ಅ.17ರಂದು ನವರಾತ್ರಿ ಉತ್ಸವ ಆರಂಭಗೊಂಡಿದ್ದು, 26ರ ತನಕ ನವರಾತ್ರಿ ಉತ್ಸವ ಜರುಗಲಿರುವುದು. ಪ್ರತಿನಿತ್ಯ ರಾತ್ರಿ 7ರಿಂದ ಪೂಜೆ, ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿರುವುದು.
ಬೈದೆಬೆಟ್ಟು ಚಿತ್ತಾರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
ಕೊಕ್ಕರ್ಣೆ: ಬೈದೆಬೆಟ್ಟು ಚಿತ್ತಾರಿ ಕಲ್ಗೋಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.17ರಿಂದ ನವರಾತ್ರಿ ಉತ್ಸವ
ಆರಂಭಗೊಂಡಿದ್ದು, 26ರ ತನಕ ಜರುಗಲಿದೆ. ಪ್ರತಿನಿತ್ಯ ರಾತ್ರಿ 7ರಿಂದ ಪೂಜೆ, ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, 26ರಂದು ಸಾರ್ವಜನಿಕ ಕಲ್ಪೋಕ್ತ ಸಹಿತ ನವರಾತ್ರಿ ಪೂಜೆ ಜರುಗಲಿರುವುದು.
ಬಗಳಾಂಬ ತಾಯಿ ದೇವಳದಲ್ಲಿ ಶರನ್ನವರಾತ್ರಿ
ಕುಂದಾಪುರ: ಇಲ್ಲಿನ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಅ.17ರಂದು ಆರಂಭಗೊಂಡಿದ್ದು, 26ರವರೆಗೆ ಶ್ರೀ ಗುರುಪರಾಶಕ್ತಿ ಮಠ ಮರಕಡದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅನುಗ್ರಹದೊಂದಿಗೆ ಕೆ. ಚಂದ್ರಶೇಖರ ಸೋಮಯಾಜಿ ನೇತೃತ್ವದಲ್ಲಿ ಜರುಗಲಿದೆ.
ಅ. 17ರಂದು ಕಲಶ ಸ್ಥಾಪನೆ, ಅ.24ರಂದು ಗಣಪತಿ ಪೂಜೆ, ಚಂಡಿಕಾಯಾಗ, ಮಹಾಪೂಜೆ, ಅನ್ನಸಂತರ್ಪಣೆ ಅ.25ರಂದು ರಾತ್ರಿ ರಂಗ ಪೂಜೆ ಅ.26ರಂದು ಕಲಶ ವಿಸರ್ಜನೆ ನಡೆಯಲಿದೆ. ಪ್ರತಿದಿನ ಸಾಯಂಕಾಲ 7ರಿಂದ ವಿವಿಧ ತಂಡಗಳಿಂದ ಭಜನೆ ನಡೆಯಲಿದೆ ಎಂದು ಆಡಳಿತ ಮಂಡಳಿ ಹಾಗೂ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾದುರ್ಗಾ ಪ್ರೀತ್ಯರ್ಥವಾಗಿ ಪುರುಷಸೂಕ್ತ ಸಂಪುಟೀಕೃತ ಶ್ರೀಸೂಕ್ತಹೋಮ, ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಠದ ಆಸ್ಥಾನ ವಿದ್ವಾಂಸರಾದ ನಂದಿಕೂರು ಜನಾರ್ದನ ಭಟ್ ಪ್ರಧಾನ ಹೋತೃತ್ವದಲ್ಲಿ ನೆರವೇರಿತು.