

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಇಂದಿನ ಕಾಲದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಡುವುದು ಅನಿವಾರ್ಯ. ಧಾರ್ಮಿಕ ಕ್ಷೇತ್ರಗಳಿಗೆ ಬರುವಾಗ ಹೆತ್ತವರು ತಮ್ಮ ಮಕ್ಕಳನ್ನು ಕರೆ ತರಬೇಕು. ಆ ಮೂಲಕ ಮಕ್ಕಳಿಗೆ ಸಂಸ್ಕಾರ ಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ನಡೆದ ಚಂಡಿಕಾಯಾಗದ ಸಮಾಪನೋತ್ಸವ ಹಾಗೂ ಕುಣಿತ ಭಜನಾ ಸ್ಪರ್ಧೆ ಸಮಾರೋಪದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಉಳೆಪಾಡಿ ಕ್ಷೇತ್ರ ಉತ್ತಮ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದೆ. ಇಂತಹ ಕಾರ್ಯ ನಿರಂತರ ನಡೆಯಬೇಕು ಎಂದರು.
ಮೂಲ್ಕಿ ವೆಂಕಟರಮಣ ದೇವಸ್ಥಾನ ಅರ್ಚಕ ರಮಾನಾಥ ಭಟ್, ಮೂಲ್ಕಿ ಠಾಣೆಯ ಅರಕ್ಷಕ ಉಪನಿರೀಕ್ಷಕಿ ಅನಿತಾ ಬಿ.ಎಚ್., ಯುಗಪುರುಷದ ಭುವನಾಭಿರಾಮ ಉಡುಪ, ಮೂರುಕಾವೇರಿ ಸರ್ವ ಧರ್ಮ ಸಂಗಮದ ನಿರ್ದೇಶಕ ಹೇಮಾಚಾರ್ಯ, ಮೆಸ್ಕಾಂ ಸುಧಾಕರ ಮತ್ತಿತರರು ಉಪಸ್ಥಿತರಿದ್ದರು.
ಚಂಡಿಕಾ ಹವನ ಮಾಡಿದ ಮೂಲ್ಕಿ ವೆಂಕರಮಣ ದೇವಸ್ಥಾನದ ಅರ್ಚಕ ರಮಾನಾಥ ಭಟ್ ಹಾಗೂ ಕೊಡೆತ್ತೂರು ಶ್ರೀನಿವಾಸ ಭಜನಾ ಮಂಡಳಿ ಸಂಘಟಕ ಕಿಶೋರ್ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್ ಸ್ವಾಗತಿಸಿದರು.
ಪ್ರಥಮ- ಶ್ರೀಲಕ್ಷ್ಮೀನಾರಾಯಣ ಭಜನಾ ಮಂಡಳಿ ಸಸಿಹಿತ್ಲು, ದ್ವಿತೀಯ- ಶ್ರೀ ಜಾರಂದಾಯ ಭಂಜ ಭಜನಾ ಮಂಡಳಿ ಏಳಿಂಜೆ, ತೃತೀಯ- ಶ್ರೀ ಜಾರಂದಾಯ ಮಹಿಳಾ ಭಜನಾ ಮಂಡಳಿ ಪಟ್ಟೆ, ಉತ್ತಮ ಹಾರ್ಮೋನಿಯಂ- ಪಟ್ಟೆ ಭಜನಾ ಮಂಡಳಿ, ಉತ್ತಮ ತಬಲಾ ಹಾಗೂ ಹಾಡುಗಾರ ಪ್ರಶಸ್ತಿಯನ್ನು ಸಸಿಹಿತ್ಲು ತಂಡ ಪಡೆದುಕೊಂಡಿತು.