

ಹಾನಗಲ್ಲ: ನೈರ್ಮಲ್ಯ ನಿರ್ವಹಣೆ ಕ್ರಮಗಳ ಪರಿಶೀಲನೆಗಾಗಿ ತಾಲೂಕು ವೈದ್ಯಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಪಟ್ಟಣದ ನವನಗರ ಬಡಾವಣೆಗೆ ತೆರಳಿದಾಗ, ಇಲ್ಲಿನ ನಿವಾಸಿಗಳು ಹಂದಿಗಳ ಹಾವಳಿ, ಗಟಾರಗಳ ಗಬ್ಬು ವಾಸನೆ, ನಾಲ್ಕಾರು ತಿಂಗಳಿನಿಂದ ಗಟಾರ ಸ್ವಚ್ಛಗೊಳಿಸದಿರುವುದನ್ನು ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿ ಸ್ವಚ್ಛತೆ ಕೈಗೊಳ್ಳುವಂತೆ ಅಂಗಲಾಚಿ ಬೇಡಿಕೊಂಡರು.
ಡೆಂಘೆ ಜಾಗೃತಿ ಹಿನ್ನೆಲೆಯಲ್ಲಿ ನವನಗರ ಬಡಾವಣೆಗೆ ತಾಲೂಕು ವೈದ್ಯಾಧಿಕಾರಿ ಡಾ.ಕೆ.ಜೆ. ಲಿಂಗರಾಜ ಹಾಗೂ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಸಿಬ್ಬಂದಿಯೊಂದಿಗೆ ತೆರಳಿದಾಗ, ನವನಗರದ ನಿವಾಸಿ ಖುರ್ಷಿದಾಬಾನು ಕಬ್ಬೂರ ಅಧಿಕಾರಿಗಳಿಗೆ ಮನೆ ಮುಂದಿನ ಗಟಾರಗಳಲ್ಲಿ ಗಲೀಜು ನೀರು ಸಂಗ್ರಹವಾಗಿರುವ ದೃಶ್ಯಗಳನ್ನು ತೋರಿಸಿ ಪುರಸಭೆಯ ನಿರ್ಲಕ್ಷ್ಯೆ ಬಿಚ್ಚಿಟ್ಟರು. ಇಲ್ಲಿನ ಜನರು ದುರ್ವಾಸನೆಯಲ್ಲೇ ದಿನ ಕಳೆಯುವಂತಾಗಿದೆ. 3-4 ತಿಂಗಳಿಗೊಮ್ಮೆ ಇಬ್ಬರು ಮೂವರು ಪೌರಕಾರ್ವಿುಕರು ಬಂದು ಗಟಾರಗಳ ಸ್ವಚ್ಛತೆ ಕೈಗೊಳ್ಳುತ್ತಾರೆ. ಪುರಸಭೆ ಸದಸ್ಯರು, ಅಧಿಕಾರಿಗಳಂತೂ ಇತ್ತ ಕಡೆ ಹಾಯುವುದೇ ಇಲ್ಲ. ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು. ಸ್ವಚ್ಛತೆ ಮಾಡಿ ಬಡವರ ಆರೋಗ್ಯದ ಬಗೆಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ಒಂದು ಗಂಟೆಯ ಕಾಲ ನವನಗರ ಬಡಾವಣೆಯಲ್ಲಿ ನಡೆದ ಸ್ವಚ್ಛತೆಯ ಪರಿಶೀಲನೆ ಅಧಿಕಾರಿಗಳಿಗೆ ಮುಜುಗರ ಉಂಟು ಮಾಡಿತು. ಇಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಸಿಬ್ಬಂದಿಯ ಕರ್ತವ್ಯಲೋಪಗಳನ್ನು ತೆರೆದಿಟ್ಟರು.
ಹಂದಿಗಳ ವಾಸಸ್ಥಾನ :
ನವನಗರ ಬಡಾವಣೆಯಲ್ಲಿ ಹಿಂಡು ಹಿಂಡಾಗಿ ಹಂದಿಗಳು ಓಡಾಡಿ ರೋಗ ಹರಡುತ್ತಿದ್ದರೂ ಅವುಗಳನ್ನು ಹೊರ ಹಾಕುವ ಪ್ರಯತ್ನ ನಡೆಯುತ್ತಿಲ್ಲ. ಊರ ತುಂಬ ಇರುವ ಹಂದಿಗಳ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಬಡಾವಣೆಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸ್ವಚ್ಛತೆಗೆ ಎಲ್ಲ ರೀತಿಯಿಂದಲೂ ಕ್ರಮ ಕೈಗೊಳ್ಳುತ್ತಿದ್ದೇವೆ. ಪೌರ ಸಿಬ್ಬಂದಿ ಕೊರತೆಯಿದೆ. ಪುರಸಭೆಯಲ್ಲಿ ಹಣಕಾಸು ಸಮಸ್ಯೆಯೂ ಇದೆ. ಇದ್ದ ಕಾರ್ವಿುಕರಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ. ಹೊರಗುತ್ತಿಗೆ ಸಿಬ್ಬಂದಿ ನೇಮಿಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ. ಚರಂಡಿಯ ಗಲೀಜು ನೀರು ನಿರ್ವಹಣೆಗೆ ಹೊಸ ಯೋಜನೆ ರೂಪಿಸುತ್ತಿದ್ದೇವೆ. | ವೈ.ಕೆ. ಜಗದೀಶ, ಪುರಸಭೆ ಮುಖ್ಯಾಧಿಕಾರಿ