ಸಕಾಲದಲ್ಲಿ ಸಾಲ ಮರುಪಾವತಿಸಿ

NAVANAGAR NEW
Published on

ಹುಬ್ಬಳ್ಳಿ : ಪ್ರತಿಯೊಬ್ಬರು ತಾವು ತೆಗೆದುಕೊಂಡ ಸಾಲಗಳನ್ನು ಸಂಬಂಧಿಸಿದ ಸಂಸ್ಥೆಗಳಿಗೆ ಸಕಾಲದಲ್ಲಿ ಮರು ಪಾವತಿಸುವ ಮೂಲಕ ಸಂಘ- ಸಂಸ್ಥೆಗಳನ್ನು ಸದೃಢಗೊಳಿಸಬೇಕು ಎಂದು ಭೂಗೋಳ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ವೈ. ಗುಬ್ಬಣ್ಣವರ ಹೇಳಿದರು.

ನವನಗರದ ಚಿಕ್ಕೇನಕೊಪ್ಪದ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಶ್ರೀ ರಾಜರಾಜೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ 10ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಸಂಸ್ಥೆಗಳ ದೈನಂದಿನ ಆಗು- ಹೋಗುಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡು, ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಡಾ. ಆರ್.ಎಫ್. ಇಂಚಲ ಮಾತನಾಡಿ, ಉಳಿತಾಯ ಮಾಡುವ ಮೂಲಕ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕಲ್ಲಪ್ಪ ಮರದೆಣ್ಣವರ ಮಾತನಾಡಿ, ಸಂಘವು ಮುಂಬರುವ ದಿನಗಳಲ್ಲಿ ಸಂಸ್ಥೆಯ ಸದಸ್ಯರ ಆರೋಗ್ಯ ತಪಾಸಣೆ ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಾರ್ಯದರ್ಶಿ ಡಾ. ಲಿಂಗರಾಜ ಕುಲಕರ್ಣಿ, ವಾರ್ಷಿಕ ವರದಿ ಸಾದರ ಪಡಿಸಿದರು. ನಿರ್ದೇಶಕರಾದ ಬಸಯ್ಯ ಹಿರೇಮಠ, ದಾನೇಶ್ವರಿ ಗೋವನಕೊಪ್ಪ, ಅಶೋಕ ಮಡಿವಾಳರ, ನಿಂಗಪ್ಪ ಅಪ್ಪಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.

ಡಾ. ಬಿ. ಎಸ್. ಮಾಳವಾಡ ಸ್ವಾಗತಿಸಿದರು. ಶಿಲ್ಪಾ ಸೋಮವಾರ ನಿರೂಪಿಸಿದರು. ಡಾ. ಶ್ರೀದೇವಿ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net