

ಕೆ.ಆರ್.ನಗರ: ಅತಿ ಹೆಚ್ಚು ಠೇವಣೆಗಳೊಂದಿಗೆ ನಮ್ಮ ಬ್ಯಾಂಕ್ ಜಿಲ್ಲೆಯಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.
ಪಟ್ಟಣದ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕ್‌ನ ರಜತ ಮಹೋತ್ಸವದ ಪ್ರಯುಕ್ತ ಉತ್ತಮ ಗ್ರಾಹಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅವರ ಅನುಕೂಲಕ್ಕೆ ನಿಂತಿದೆ ಎಂದರು.
ನಮ್ಮ ಬ್ಯಾಂಕ್ ಅನ್ನು 1998ರಲ್ಲಿ ಮಾಜಿ ಸಚಿವ ದಿ.ಎಸ್.ನಂಜಪ್ಪ ಸ್ಥಾಪಿಸಿದರು. 25ನೇ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉತ್ತಮ ಗ್ರಾಹಕರನ್ನು ಅಭಿನಂದಿಸಲಾಗುತ್ತಿದೆ. ಮೈಸೂರಿನ ಹೂಟಗಳ್ಳಿ ಸೇರಿದಂತೆ ಕೆ.ಆರ್.ನಗರ, ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿದ್ದು, ಕೆ.ಆರ್.ನಗರದಲ್ಲಿ ಕೇಂದ್ರ ಕಚೇರಿ ಹೊಂದಿದೆ ಎಂದು ಹೇಳಿದರು.
ಶಿಕ್ಷಣ, ಗೃಹ ನಿರ್ಮಾಣ, ಚಿನ್ನದ ಮೇಲೆ ಸಾಲ ಹಾಗೂ ಆಸ್ತಿ ಆಧಾರದ ಮೇಲೆ ಸಾಲ ನೀಡಲಾಗುತ್ತದೆ. ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಸಾಲ ನೀಡಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳಿಗೆ ಕೇವಲ ಶೇ.1ರಂತೆ 50 ಸಾವಿರ ರೂ.ಸಾಲ ನೀಡುವ ಮೂಲಕ ನೆರವಿಗೆ ನಿಂತಿದೆ ಎಂದರು.
ಹೈನುಗಾರಿಕೆ, ಕೋಳಿ ಹಾಗೂ ಕುರಿ ಫಾರಂ ನಡೆಸುತ್ತಿರುವವರಿಗೂ ಸಾಲ ನೀಡಲಾಗುತ್ತದೆ. ಬ್ಯಾಂಕ್‌ನಲ್ಲಿ ಕರೆಂಟ್, ಸೇವಿಂಗ್ಸ್ ಅಕೌಂಟ್‌ಗಳನ್ನು ತೆರೆಯಬಹುದು. ಎಟಿಎಂ ಬಳಕೆ ಇದೆ. ಜತೆಗೆ ಆರ್‌ಟಿಜಿಎಸ್, ನೆಫ್ಟ್ ಸೌಲಭ್ಯಗಳು 24 ಗಂಟೆಯೂ ಇರುತ್ತದೆ. ಶೀಘ್ರವಾಗಿ ಪೋನ್ ಪೇ, ಗೂಗಲ್ ಪೇ ಬಳಕೆಯ ಅನುಕೂಲವನ್ನು ಗ್ರಾಹಕರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನಮ್ಮ ಬ್ಯಾಂಕ್ ಕೇವಲ ಠೇವಣಿ ಹಣದಿಂದ ಸಾಲ ಕೊಟ್ಟು ಅದರಿಂದ ಲಾಭ ಗಳಿಸುತ್ತಿದ್ದು, ನಮ್ಮಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರೋತ್ಸಾಹ ನಿಡಲಾಗುತ್ತಿದೆ. ಅವರ ಠೇವಣೆಗೆ ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಇದರ ಅನುಕೂಲ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಉತ್ತಮ ಗ್ರಾಹಕರಿಗೆ ಉಡುಗೊರೆ ನೀಡುವ ಮೂಲಕ ಅಭಿನಂದಿಸಲಾಯಿತು. ಮಾಜಿ ಸಚಿವ ದಿ.ಎಸ್.ನಂಜಪ್ಪ ಅವರ ಪತ್ನಿ ಲಲಿತಮ್ಮ ನಂಜಪ್ಪ, ಪುತ್ರ ಕೆ.ಎನ್.ದಿನೇಶ್, ಬ್ಯಾಂಕ್‌ನ ಆಡಳಿತ ಮಂಡಳಿ ಉಪಾಧ್ಯಕ್ಷೆ ಸರೋಜಾ ನಾರಾಯಣ್, ನಿರ್ದೇಶಕ ವಿಜಯಕುಮಾರ್, ರಶ್ಮಿ ದಿನೇಶ್, ವೈ.ಎಸ್.ಕುಮಾರ್, ಕೇಶವ್, ಎಂ.ಕೆ.ಮಹದೇವ್, ಚಂದ್ರಕುಮಾರ್, ಎಸ್.ಮಹದೇವಯ್ಯ, ಎ.ಚಂದ್ರಶೇಖರ್, ಸುಬ್ಬನಾಯಕ, ಅಪ್ಸರಬಾಬು, ಕೆ.ಎನ್.ರಮೇಶ್ ರಾವ್, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಎಚ್.ಬಿ.ಅನಂತರಾಮಯ್ಯ, ಎನ್.ಎಸ್.ವಿಶ್ವನಾಥ್, ವಿ.ಶ್ರೀನಿವಾಸಮೂರ್ತಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಇನ್ನಿತರರು ಹಾಜರಿದ್ದರು.