ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ

7-nvl- horatti
Published on

ನವಲಗುಂದ: ಸಮಾಜದಲ್ಲಿ ಶಿಕ್ಷಕರ ಸೇವೆ ತುಂಬಾ ಶ್ರೇಷ್ಠವಾದುದು. ಒಬ್ಬ ವ್ಯಕ್ತಿ ಜೀವನ ರೂಪಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಪಟ್ಟಣದ ತಾಲೂಕು ಪ್ರಾಥಮಿಕ ಶಿಕ್ಷಕ-ಶಿಕ್ಷಕಿಯರ ಸಹಕಾರಿ ಪತ್ತಿನ ಕಲ್ಯಾಣ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮ ದಿನ, ತಾಲೂಕು ಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಳೇ ವಿದ್ಯಾರ್ಥಿಯೊಬ್ಬ ನಿಮ್ಮನ್ನು ನೆನಪು ಇಟ್ಟುಕೊಂಡು ನಿಮ್ಮನ್ನು ಮಾತನಾಡಿಸಿದ್ದಾರೆ ಎಂದರೆ ಅದು ನಿಮ್ಮ ಪಾಠದ ಪರಿಣಾಮ ಹಾಗೂ ಅವರು ನಿಮಗೆ ನೀಡುವ ಗೌರವವಾಗಿದೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಶಿಕ್ಷಕರಲ್ಲಿ ಕಲಿಸಬೇಕು ಎನ್ನುವ ಹಂಬಲವಿದ್ದಾಗಲೇ ಕಲಿಕೆಯಲ್ಲಿ ಸುಧಾರಣೆ ಸಾಧ್ಯ. ಸರ್ಕಾರ ಎಲ್ಲ ಸೌಲಭ್ಯ ನೀಡಿದರೂ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ದಾಖಲಾಗುತ್ತಿದೆ. ಶೈಕ್ಷಣಿಕ ಪ್ರಗತಿ ಕುಂಠಿತವಾಗದಂತೆ ಶಿಕ್ಷಕರು ಗುಣಮಟ್ಟದ ಬೋಧನೆ ಮಾಡಬೇಕು ಎಂದರು.
ಬಿಇಒ ಶಿವಾನಂದ ಮಲ್ಲಾಡ, ತಾಪಂ ಇಒ ಭಾಗ್ಯಶ್ರೀ ಜಾಗಿರದಾರ, ಆರ್.ವಿ. ಕುರವತ್ತಿಮಠ, ಸಂಜೀವ ಹಿರೇಗೌಡ್ರ, ಪುರಸಭೆ ಸದಸ್ಯ ಮಂಜು ಜಾಧವ, ಜೀವನ ಪವಾರ, ಮೋದಿನಸಾಬ್ ಶಿರೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net