

ನವಲಗುಂದ: ಶಿಕ್ಷಣ ಗುಣಮಟ್ಟ ಸರಿಯಾಗಿದ್ದರೆ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಆಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ತ್ರೈಮಾಸಿಕ (ಕೆಡಿಪಿ) ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರೊೃೀತ್ಸವ ವನ್ನು ಹಬ್ಬದಂತೆ ಆಚರಿಸಬೇಕು. ಆದರೆ, ಯಾವ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ ಅಂತಹವರಿಗೆ ನೋಟಿಸ್ ನೀಡಬೇಕು ಎಂದು ತಾಪಂ ಇಒ ಭಾಗ್ಯಶ್ರೀ ಜಾಗೀರದಾರ ಹಾಗೂ ಬಿಇಒ ಶಿವಾನಂದ ಮಲ್ಲಾಡದ ಅವರಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೊರತೆ ಎದ್ದು ಕಾಣುತ್ತಿತ್ತು. ಮುಂದಿನ ದಿನಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಹಬ್ಬಗಳಲ್ಲಿ ಈ ಸಮಸ್ಯೆ ಎದುರಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುದು ಎಂದು ಎಚ್ಚರಿಕೆ ನೀಡಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಸಂಜೀವ ಕುಮಾರ ಗುಡಿಮನಿ ಇಲಾಖೆಯ ಪ್ರಗತಿ ಕುರಿತು ವಿವರಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಶಾಸಕರು, ರೈತರಿಗೆ ದೊರಕುವ ಸೌಲಭ್ಯಗಳ ಮಾಹಿತಿಯನ್ನು ಸರಿಯಾಗಿ ನೀಡಬೇಕು. ರೈತರಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಂಥ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುವುದು ಎಂದರು. ತಾಲೂಕಿನ 12 ಗ್ರಾಮಗಳಲ್ಲಿ ಕುಡಿಯವ ನೀರಿನ ಕೊರತೆಯಿದ್ದು, ಇದಕ್ಕೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಸ್.ಎಸ್. ಲಂಗೂಟಿ ಅವರನ್ನು ಶಾಸಕರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅವರು, ತಾಲೂಕಿನ ಹಲವಾರು ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಮಲಪ್ರಭಾ ಕಾಲುವೆ ಮೂಲಕ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಕೃಷಿ ಇಲಾಖೆ ಅಧಿಕಾರಿ ಶ್ರೀನಾಥ ಚಿಮ್ಮಲಗಿ ಮಾತನಾಡಿ, ಬೆಳೆವಿಮೆ ಪರಿಹಾರಧನ ಬಿಡುಗಡೆಯಲ್ಲಿ ಆಗುತ್ತಿರುವ ಸಮಸ್ಯೆ ಗಳನ್ನು ನಿವಾರಿಸಬೇಕು ಎಂದು ಮನವಿ ಮಾಡಿದರು.
ಎಸಿ ಅಶೋಕ ತೇಲಿ, ತಹಸೀಲ್ದಾರ್ ಸುಧೀರ ಸಾಹುಕಾರ, ಜಂಟಿ ಕೃಷಿ ನಿರ್ದೇಶಕ ಕಿರಣಕುಮಾರ, ಪುರಸಭೆ ಸದಸ್ಯ ಎಂ. ಪ್ರಕಾಶ ಶಿಗ್ಲಿ, ಜೀವನ ಪವಾರ, ನಂದಕುಮಾರ ಶಿಂಧೆ ಇದ್ದರು.