ಬಸ್ ಪ್ರಯಾಣ ಪ್ರಯಾಣಿಕರು ಹೈರಾಣ ನವಲಗುಂದ ನಿಲ್ದಾಣದಲ್ಲಿ ಹೆಚ್ಚುತ್ತಿದೆ ಕಳ್ಳರ ಹಾವಳಿ

29-nvl-1- bustand
Published on

ನವಲಗುಂದ: ಪಟ್ಟಣದ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾಗಳು ಇಲ್ಲದ ಕಾರಣ ನಿತ್ಯ ಪ್ರಯಾಣಿಕರ ವಸ್ತುಗಳು ಕಳ್ಳರ ಪಾಲಾಗುತ್ತಿವೆ.

ಪಿಕ್ ಪ್ಯಾಕೆಟ್, ಸರಗಳ್ಳತನ ಹಾಗೂ ಮೊಬೈಲ್ ಸೇರಿ ಇತರೆ ವಸ್ತುಗಳ ಕಳ್ಳತನ ಪ್ರಕರಣಗಳು ನಿತ್ಯ ದಾಖಲಾಗುತ್ತಲೇ ಇವೆ. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಇಲ್ಲಿನ ಬಸ್ ನಿಲ್ದಾಣದಿಂದ ನಿತ್ಯ ನೂರಾರು ಬಸ್ ಸಂಚರಿಸುತ್ತಿವೆ. ಪ್ರತಿ ದಿನ ಸಾವಿರಾರು ಪ್ರಯಾಣಿಕರು ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ಬೆಳಗಾವಿ, ವಿಜಯಪುರ, ಗದಗ ಹೀಗೆ ಹಲವಾರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಸ್ ನಿಲ್ದಾಣ ಇದಾಗಿದೆ. ಇಲ್ಲಿಂದ ದೂರದ ಹೈದರಾಬಾದ್, ಸೊಲ್ಲಾಪುರಗಳಿಗೂ ಈ ನಿಲ್ದಾಣದಿಂದಲೇ ಪ್ರಯಾಣಿಕರು ಓಡಾಡುತ್ತಾರೆ. ನೂರಾರು ಗ್ರಾಮಗಳ ಜನರು ನಿಲ್ದಾಣಕ್ಕೆ ಬಂದು ಬಸ್ ಹತ್ತುವ ವೇಳೆಯೇ ಕಳ್ಳರು ತಮ್ಮ ಕೈಚಳಕ ತೋರುತ್ತಾರೆ.

ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಪರಿಣಾಮವಾಗಿ ನಿತ್ಯ ಸಾವಿರಾರು ಜನರು ಬಸ್​ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ಈ ವೇಳೆ ಪ್ರಯಾಣಿಕರು ಸೀಟಿಗಾಗಿ ಮುಗಿಬೀಳುವ ವೇಳೆಯೇ ಕಳ್ಳರು ನೂಗುನುಗ್ಗಲಿನ ಗದ್ದಲ ನೋಡಿಕೊಂಡು ಪಿಕ್ ಪ್ಯಾಕೆಟ್ ಅಥವಾ ಮೊಬೈಲ್ ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ.

ಬಸ್ ಸೌಲಭ್ಯ ಕೊರತೆಯಿಂದ ಇಂಥಹ ಅವಘಡಗಳು ನಡೆಯುತ್ತಲಿವೆ. ಸರಗಳ್ಳತನ ಅಥವಾ ಪಿಕ್ ಪ್ಯಾಕೆಟ್​ನಂಥ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಮೊಬೈಲ್ ಫೋನ್​ಗಳು ಕಳ್ಳತನವಾಗುತ್ತಿರುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು. | ಜನಾರ್ದನ ಬಿ., ನವಲಗುಂದ ಠಾಣೆ ಪಿಎಸ್​ಐ

ಬಸ್ ನಿಲ್ದಾಣದಲ್ಲಿ ಮೊದಲೇ ಕುಳಿತುಕೊಳ್ಳಲು ಜಾಗವಿಲ್ಲ. ಹೀಗಿದ್ದರೂ ನಿಲ್ದಾಣದ ಒಳಗಡೆ ಡಬ್ಬಾ ಅಂಗಡಿಗಳನ್ನು ನಿರ್ವಿುಸಲಾಗಿದೆ. ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಎರಡು ವರ್ಷದ ಹಿಂದೆಯೇ ಮನವಿ ಮಾಡಿದರೂ ಈವರೆಗೆ ಯಾವ ಕ್ರಮ ಕೈಗೊಂಡಿಲ್ಲ. - ನಿಂಗಪ್ಪ ಕೆಳಗೇರಿ, ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ

100 ಹೊಸ ಬಸ್​ಗಳಿಗಾಗಿ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿದೆ. ಸದ್ಯದಲ್ಲಿಯೇ ಹೊಸ ಬಸ್​ಗಳು ಬರುವ ನಿರೀಕ್ಷೆ ಇದೆ. ಪ್ರಯಾಣಿಕರಿಗೆ ತೊಂದರೆ ಆಗರ ರೀತಿ ಎಲ್ಲ ಕಡೆ ಬಸ್ ಓಡಿಸುವ ವ್ಯವಸ್ಥೆ ಮಾಡಲಾಗುವುದು. - | ಎನ್.ಎಚ್. ಕೋನರಡ್ಡಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net