ಎಲ್ಲೆಡೆ ಕನ್ನಡ ಭಾಷೆ ಬಳಕೆಗೆ ಸಿಗಲಿ ಮನ್ನಣೆ

navajyoti kalasanga
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಕನ್ನಡದ ಕೆಲಸಗಳು ಜೀವನದ ಭಾಗವಾಗಬೇಕು. ಮನೆಗಳಲ್ಲಿ, ವ್ಯಾಪಾರದಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವ ಮೂಲಕ ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಡಾ. ತಾ.ನಂ.ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನವಜ್ಯೋತಿ ಕಲಾ ಸಂಘದ 50ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ತಾಲೂಕು ಗಡಿಭಾಗವಾಗಿದ್ದು, ಕನ್ನಡದ ಅಸ್ಮಿತೆಯ ಪ್ರತೀಕವಾಗಿ ಕನ್ನಡ ಸಂಘಗಳು ಕೆಲಸ ಮಾಡುತ್ತಿವೆ. 50 ವರ್ಷಗಳ ಕಾಲ ಕನ್ನಡ ಸಂಘವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕನ್ನಡ ಸಂಘದ ಮೂಲಕ ಹೋರಾಟ, ಕಾರ್ಯಕ್ರಮ ರೂಪಿಸಿಕೊಂಡು ಬಂದ ಹೆಗ್ಗಳಿಕೆ ನವಜ್ಯೋತಿ ಕನ್ನಡ ಸಂಘಕ್ಕೆ ಸಲ್ಲುತ್ತದೆ ಎಂದ ಅವರು, ಪುರಸಭೆ ಕನ್ನಡ ಸಂಘಕ್ಕಾಗಿ ಸ್ಥಳ ನೀಡಿದ್ದರಿಂದ ಕನ್ನಡಪರ ಕಾರ್ಯಕ್ರಮಗಳಿಗೆ ಉಪಯುಕ್ತವಾಗಿದೆ ಎಂದು ಹೇಳಿದರು.
80 ದಶಕಗಳಲ್ಲಿ ಆನೇಕಲ್‌ನಲ್ಲಿ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ ಮಾಡುತ್ತಿರಲಿಲ್ಲ. ಆ ಸಂದರ್ಭದಲ್ಲಿ ಸಂಘವು ಹೋರಾಟ ಮಾಡಿ ಕನ್ನಡ ಚಿತ್ರ ಪ್ರದರ್ಶಿಸಲು ಒತ್ತಾಯ ಮಾಡಿತ್ತು. ಹೋರಾಟಗಳಿಂದಾಗಿ ಸಾಕಷ್ಟು ಮಂದಿ ಜೈಲು ಸೇರಿದ್ದರು. ಸಂಕಷ್ಟದ ಸಮಯದಲ್ಲಿ ಕನ್ನಡವನ್ನು ಕಟ್ಟಲು ಶ್ರಮಿಸಿದ ಪದಾಧಿಕಾರಿಗಳ ಸೇವೆ ಶ್ಲಾಘನೀಯ ಎಂದು ಸ್ಮರಿಸಿದರು.
ನವಜ್ಯೋತಿ ಕನ್ನಡ ಕಲಾ ಸಂಘದ ಅಧ್ಯಕ್ಷ ವಿ.ಉಮಾಪತಿ ಮಾತನಾಡಿ, ಸಂಘವು ಐದು ದಶಕಗಳಿಂದಲೂ ಕನ್ನಡ ಪರ ಕಾರ್ಯಕ್ರಮಗಳ ಆಯೋಜಿಸಿಕೊಂಡು ಬಂದಿದೆ. ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು ಎಂದು ಸ್ಮರಿಸಿದರು.
ಮನೆ ಮನೆಗಳಲ್ಲಿ ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯನ್ನು ಬೆಳೆಸಲು ಶ್ರಮಿಸಿದ ತೃಪ್ತಿಯಿದೆ ಎಂದರು.
ಸಂಘದ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಿದ ನರಸಮ್ಮ, ವೆಂಕಟರಾಜು, ದೇವರಾಜು, ನರಸಿಂಹಯ್ಯ ಅವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಡಾ.ಜಿ.ಮುನಿರಾಜು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆದೂರು ಪ್ರಕಾಶ್, ಖಜಾಂಚಿ ಅಪ್ಪರ್ ಅಲಿಖಾನ್, ನವಜ್ಯೋತಿ ಕನ್ನಡ ಕಲಾ ಸಂಘದ ಕಾರ್ಯದರ್ಶಿ ಟಿ.ಶ್ರೀನಿವಾಸ್, ಖಜಾಂಚಿ ಟಿ.ನಾಗರಾಜು, ಸದಸ್ಯರಾದ ವಿ.ವಾಸು, ಕೃಷ್ಣಮೂರ್ತಿ, ಎಸ್.ಭುವನೇಶ್ವರ್, ಬಿ.ವಿ.ಶ್ರೀನಿವಾಸ್, ಹೇಮಂತ್‌ಕುಮಾರ್, ಜಿ.ರಂಗನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net