

ತುಮಕೂರು: ಸದಾ ಉತ್ತಮ ಚಿಂತನೆ ಮಾಡುವ ಜತೆಗೆ ದುಶ್ಚಟಗಳನ್ನು ತೊರೆದಾಗ ಮನುಷ್ಯ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಎಂದು ಶ್ರೀಶ್ವೇತ ಕಮಠಾಪುರಿ ಜಂಗಮ ಸುಕ್ಷೇತ್ರದ ಶ್ರೀಕಾರದ ವೀರಬಸವ ಸ್ವಾಮೀಜಿ ಹೇಳಿದರು.
ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನವಜೀವನೋತ್ಸವ ಮತ್ತು ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧರ್ಮಗಳನ್ನು ಹೋಗಲಾಡಿಸುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಕಾರ್ಯ ಶ್ಲಾಘನೀಯ, ಮನುಷ್ಯ ಹಾಳಾಗುವ ಸಮಯದಲ್ಲಿ ಧರ್ಮ ಉಳಿಸುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದರು.
ಸರ್ಕಾರ ಕುಡಿಸಿ ಹಾಳು ಮಾಡುತ್ತಿದ್ದರೆ ಧರ್ಮಸ್ಥಳ ಪರ್ಯಾಯ ಯೋಜನೆಗಳ ಮೂಲಕ ಧರ್ಮಸ್ಥಳ ಸಂಸ್ಥೆ ಇದರಲ್ಲಿ ಸಿಲುಕಿರುವವರಿಗೆ ನವಜೀವನವನ್ನು ಕಲ್ಪಿಸಿಕೊಡುತ್ತಿದೆ, ಅದಕ್ಕೆ ಧರ್ಮಸ್ಥಳದ ಮಂಜುನಾಥನ ದೈವಿಶಕ್ತಿ ಪ್ರೇರಣೆಯಾಗಿದ್ದು, ಮದ್ಯವ್ಯಸನ ಬಿಟ್ಟು ಉತ್ತಮ ಜೀವನ ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.
ಸ್ನೇಹಿತರ ಒತ್ತಾಸೆಗೋ, ಪ್ರೇರಣೆಗೋ ಒಳಗಾಗಿ ಕುಡಿಯುವುದನ್ನು ಕಲಿತು, ಜೀವನ ನರಕ ಮಾಡಿಕೊಂಡವರು ಅರ್ಥ ಮಾಡಿಕೊಳ್ಳಬೇಕಿದೆ, ಜೀವನ ಹಾಳಾದಾಗ ಯಾವ ಸ್ನೇಹಿತರು ಬಂದು ಸರಿಪಡಿಸುವುದಿಲ್ಲ. ಹಾಗಾಗಿ, ಸಜ್ಜನರ ಸಹವಾಸದಿಂದ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಕುಟುಂಬದ ಜವಾಬ್ದಾರಿ ಹೊರಬೇಕಾದ ಶೇ.40 ಮಂದಿ ಇಂದು ಮದ್ಯಕ್ಕೆ ದಾಸರಾಗಿ ಕುಟುಂಬದ ಹೊಣೆ ಮರೆತಿದ್ದಾರೆ, ಧರ್ಮಸ್ಥಳ ಸಂಸ್ಥೆಯ ಜನಜಾಗೃತಿ ವೇದಿಕೆ 153 ತಾಲೂಕುಗಳಲ್ಲಿ ಮದ್ಯಪಾನದ ವಿರುದ್ಧ ಹೋರಾಟ ಹಮ್ಮಿಕೊಂಡಿದೆ, ಕುಡಿತದ ದಾಸ್ಯದಿಂದ ಹೊರಬಂದು ಕುಟುಂಬ ನಿರ್ವಹಣೆ ಮಾಡುವ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದು ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪ್ರೆಸ್ ರಾಜಣ್ಣ ಹೇಳಿದರು.
ಯುವ ಸಮುದಾಯ ಇಂದು ಮಾದಕ ವ್ಯಸನಿಗಳಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು, ಮಾದಕ ವಸ್ತು, ವ್ಯಸನದಿಂದ ಹೊರಬರುವ ನಿಟ್ಟಿನಲ್ಲಿ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ತಿಳಿಸಬೇಕು, ಗಾಂಧೀಜಿ ಅವರ ಆದರ್ಶವನ್ನು ಪಾಲಿಸಬೇಕು, ಗಾಂಧಿ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಆಸ್ತಿಯಾಗಿ ರೂಪುಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಹತ್ತು ವರ್ಷಗಳಿಂದ ಅರಿವು: ದಾನಕ್ಕೆ ಹೆಸರಾಗಿರುವ ಧರ್ಮಸ್ಥಳ ಸಂಸ್ಥೆ ಬಡವರ ಅಭಿವೃದ್ಧಿ ಸಹಾಯ ಮಾಡುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭಿಸಿ ಸಾಲಸೌಲಭ್ಯ ನೀಡುವ ಕಾರ್ಯ ಪ್ರಾರಂಭಿಸಿದರು, ಸಾಲವನ್ನು ಸದ್ಬಳಕೆ ಮಾಡದ ಕಾರಣ ಕುಡಿತ, ಕುಡಿತ ಬಿಡಿಸುವುದಕ್ಕಾಗಿಯೇ ಕಳೆದ ಮೂವತ್ತು ವರ್ಷಗಳಿಂದ ಮದ್ಯ ವರ್ಜನ ಕಾರ್ಯ ನಡೆಸುತ್ತಿದೆ ಎಂದು ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಪಿ.ಗಣೇಶ್ ಆಚಾರ್ಯ ಹೇಳಿದರು. ರಾಜ್ಯದಲ್ಲಿ 1.20 ಲಕ್ಷ ಜನ ಮದ್ಯವರ್ಜನ ಶಿಬಿರದ ಅನುಕೂಲ ಪಡೆದುಕೊಂಡು ನವ ಜೀವನದಲ್ಲಿ ಭಾಗಿಯಾಗಿದ್ದಾರೆ ಇದರಿಂದ ಹತ್ತು ಲಕ್ಷ ಮಂದಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ, ಶಾಲಾ ಮಕ್ಕಳಿಗೆ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದ ಮೂಲಕ ಕಳೆದ ಹತ್ತು ವರ್ಷಗಳಿಂದ ದುಶ್ಚಟಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.