4ರಂದು ಹೊಸಮಾರಿಗುಡಿ ಕ್ಷೇತ್ರದಲ್ಲಿ ನವಚಂಡಿ ಯಾಗ

nava
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಸಾನ್ನಿಧ್ಯ ವೃದ್ಧಿ ಮತ್ತು ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಫೆ.4ರಂದು ನವಚಂಡಿ ಯಾಗ ನಡೆಯಲಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ಹೇಳಿದರು.

ದೇವಸ್ಥಾನದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕುಮಾರಗುರು ನೇತೃತ್ವದಲ್ಲಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ ಉಪಸ್ಥಿತಿಯಲ್ಲಿ ನವಚಂಡಿ ಯಾಗ ಪೂರ್ವಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 3ರಂದು ಬೆಳಗ್ಗೆ 9 ಗಂಟೆಗೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಮಾತೃಕಾ ಪೂಜನಂ, ನಾಂದಿ ಸಮಾರಾಧನಂ, ಅರಳಿ ಪೂಜನಂ, ವೇದ ಪಾರಾಯಣಂ, ಅರಣೀ ಮತನಂ, ಅಗ್ನಿ ಸಂರಕ್ಷಣಂ, ನಿರ್ವಿಘ್ನಾಂಗ ಆಧ್ಯಗಣಯಾಗ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5.30ಕ್ಕೆ ನವಚಂಡಿಪಾರಾಯಣಂ, ಕುಂಡ ಸಂಸ್ಕಾರ, ಅಗ್ನಿ ಜನನಂ, ವಾಗ್ದೇವತಾ ಪೂಜೆ, ಅಷ್ಟಾವಧಾನಂ ನೆರವೇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

4ರಂದು ಬೆಳಗ್ಗೆ 6.30ಕ್ಕೆ ನವಚಂಡಿ ಯಾಗ ಆರಂಭ, ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ, 11ಕ್ಕೆ ಪೂರ್ಣಾಹುತಿ, ಮಹಾಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಚಿವ ರಾಮಲಿಂಗಾ ರೆಡ್ಡಿ, ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತ ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಕೋಶಾಧಿಕಾರಿ ಕೆ.ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ಸಂಚಾಲಕ ಸುವರ್ಧನ ನಾಯಕ್, ಮಹಿಳಾ ಮುಖ್ಯ ಸಂಚಾಲಕಿ ಗೀತಾಂಜಲಿ ಎಂ.ಸುವರ್ಣ, ಮಹಿಳಾ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್ ಉಪಸ್ಥಿತರಿದ್ದರು.

ಕಾಪು ಅಮ್ಮನ ತಂಡ ಸೇರ್ಪಡೆಗೆ ಅವಕಾಶ

ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವ ಉದ್ದೇಶದೊಂದಿಗೆ ಈಗಾಗಲೇ ಪುಸ್ತಕ ತೆಗೆದುಕೊಂಡು ಹೋಗಿ ಲೇಖನ ಬರೆಯುತ್ತಿರುವ ಮಂದಿ ಫೆ.3ರ ಒಳಗೆ ಶಿಲಾಸೇವೆ ಸಹಿತ ತಾವು ಬರೆದ ಪುಸ್ತಕವನ್ನು ದೇವಸ್ಥಾನಕ್ಕೆ ಸಮರ್ಪಿಸಿ ಫೆ. 4ರಂದು ನಡೆಯುವ ನವ ಚಂಡಿಯಾಗದ ಸಂಕಲ್ಪದಲ್ಲಿ ಭಾಗವಹಿಸಬೇಕು. ಒಂಬತ್ತು ಮತ್ತು ಅದಕ್ಕಿಂತ ಹೆಚ್ಚಿನ ಶಿಲಾಸೇವೆ ನೀಡುವ ಭಕ್ತರಿಗೆ ಕಾಪು ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಅಧ್ಯಕ್ಷ ಕೆ.ರಘುಪತಿ ಭಟ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net