

ಸಾಗರ: ನಾಟ್ಯ ತರಂಗ ಸಂಸ್ಥೆ ನಿರಂತರವಾಗಿ ನೃತ್ಯ, ಸಂಗೀತ, ಯಕ್ಷಗಾನದಂತಹ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವುದು ಅನುಕರಣೀಯ ಸಂಗತಿ ಎಂದು ರಂಗಕರ್ಮಿ ಸಿ.ಟಿ.ಬ್ರಹ್ಮಾಚಾರ್ ಹೇಳಿದರು.
ನಗರದಲ್ಲಿ ಭಾನುವಾರ ನಾಟ್ಯ ತರಂಗ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಸರಣಿ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭರತನಾಟ್ಯವನ್ನು ಜನಪ್ರಿಯಗೊಳಿಸುವ ಜತೆಗೆ ಅದನ್ನು ಜನರ ಬಳಿಗೆ ತೆಗೆದುಕೊಂಡು ಹೋದ ಹೆಗ್ಗಳಿಕೆ ನಾಟ್ಯತರಂಗ ಸಂಸ್ಥೆಯ ವಿದ್ವಾನ್ ಜನಾರ್ದನ್ ಅವರಿಗೆ ಸಲ್ಲುತ್ತದೆ. ಪ್ರತಿ ತಿಂಗಳು ಹೆಸರಾಂತ ನೃತ್ಯಗಾರರನ್ನು ಕರೆಸಿ ವೈವಿಧ್ಯಮಯ ನೃತ್ಯವನ್ನು ಸ್ಥಳೀಯವಾಗಿ ಪರಿಚಯಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಜತೆಗೆ ಹೊಸ ಹೊಸ ನೃತ್ಯಗಾರರನ್ನು ವೇದಿಕೆಗೆ ತರುವ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಟ್ಯತರಂಗ ಸಂಸ್ಥೆ ಮುಖ್ಯಸ್ಥ ಜಿ.ಬಿ.ಜನಾರ್ದನ್, ಸಂಗೀತ, ನೃತ್ಯದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಸಾವಿರಾರು ಮಕ್ಕಳು ನಮ್ಮಲ್ಲಿ ನೃತ್ಯಾಭ್ಯಾಸ ನಡೆಸಿ ದೇಶದ ಮೂಲೆ ಮೂಲೆಗಳಲ್ಲಿ ಪ್ರದರ್ಶನ ನೀಡುತ್ತಿರುವುದು ನಮಗೆ ಹೆಮ್ಮೆ ತರುತ್ತಿದೆ ಎಂದು ತಿಳಿಸಿದರು. ಶಿವಮೊಗ್ಗದ ಸೌಮ್ಯಾ ರಂಗಸ್ವಾಮಿ ಒಡಿಸ್ಸಿ ನೃತ್ಯ, ಬೆಂಗಳೂರಿನ ಅನುರಾಧಾ ಹೆಗಡೆ ಭರತನಾಟ್ಯ ಪ್ರದರ್ಶಿಸಿದರು. ಸಿಂಚನಾ, ಅನುಷಾ, ಶಮಾ ಇತರರಿದ್ದರು.