ಪ್ರಕೃತಿ ಆರಾಧನೆ ಪುಣ್ಯದ ಕಾಯಕ

SDP Kalivana
Published on

ಸಿದ್ದಾಪುರ: ಮನುಷ್ಯರಾದವರು ಪಂಚಯಜ್ಞಗಳನ್ನು ನಡೆಸುವಂತೆ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಪ್ರಕೃತಿ ಆರಾಧನೆಯೂ ಒಂದಾಗಿದೆ. ಕಾಳಿಕಾ ಮಾತೆಯು ಕಾಡಿನಲ್ಲಿರುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಔಷಧೀಯ ಹಾಗೂ ಅಪರೂಪದ ಗಿಡಮರಗಳನ್ನು ನೆಟ್ಟು ಬೆಳೆಸುವ ಮೂಲಕ ವನ-ಬನಗಳನ್ನು ಸೃಷ್ಟಿಸಬೇಕು. ಪ್ರಕೃತಿ ಆರಾಧನೆ ಪುಣ್ಯಪ್ರದವಾದ ಕಾಯಕ ಎಂದು ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದಭಾರತೀ ಸ್ವಾಮೀಜಿಗಳು ಹೇಳಿದರು.

ವಿಶ್ವಪರಿಸರ ದಿನಾಚರಣೆ ಮತ್ತು ಕಾಳಿವನ ನಿರ್ಮಾಣಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.
ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿ, ಪಶ್ಚಿಮಘಟ್ಟದಲ್ಲಿಯ ಸಸ್ಯ ವೈವಿಧ್ಯಗಳ ಮಹತ್ವ ಅರಿತು ಅವುಗಳನ್ನು ಸಂರಕ್ಷಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ. ನಾಯ್ಕ ಕಡಕೇರಿ ಮಾತನಾಡಿ, ಹಿಂದಿನಿಂದಲೂ ನಾಗಬನ, ಚೌಡಿವನ, ಭೂತವನ, ಜಟಕಬನ ಹೀಗೆ ನಂಬಿಕೆಯಿಂದ ಕಾಪಾಡಿದ ಕಾರಣ ಇಂದಿಗೂ ಅವುಗಳಲ್ಲಿ ಅನೇಕ ಸಸ್ಯ ಪ್ರಬೇಧಗಳು ಉಳಿದು ಬೆಳೆದು ಬೀಜ ಪ್ರಸರಣಾ ತಾಣಗಳಾಗಿವೆ ಎಂದರು.
ಎಸಿಎಫ್ ಪ್ರವೀಣಕುಮಾರ ಬಸ್ರೂರು, ದೇವಾಲಯ ಸಮಿತಿಯ ಜಿ.ಜಿ.ಭಟ್ಟ ಹೆಗ್ಗಾರಳ್ಳಿ, ಜಯವಂತ ಶಾನಭಾಗ, ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಪಿ.ಬಿ. ಹೊಸೂರ, ಮಾರುತಿ ಕಿಂದ್ರಿ, ಮಂಜುನಾಥ ಹೆಗಡೆ (ಶಾಂತಿಕಾಂಬಾ) ಇತರರಿದ್ದರು.

ಗಾಯಕ ಸುಧೀರ ಬೇಂಗ್ರೆ ಪ್ರಾರ್ಥನೆ ಹಾಡಿದರು. ಡಿಆರ್‌ಎಫ್‌ಒ ಮಂಜುನಾಥ ಚೆನ್ನಣ್ಣವರ ಸ್ವಾಗತಿಸಿದರು. ಭಾರತಿ ಸಂಪದ ಪ್ರಮುಖ ಗಣಪತಿ ಹೆಗಡೆ ವಡ್ಡಿನಗದ್ದೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net