ಪ್ರಕೃತಿ ಪೂಜೆಯು ಭಾರತೀಯ ಸಂಸ್ಕೃತಿ, ಪರಂಪರೆಯ ಭಾಗ

Nature worship is a part of Indian culture and heritage
Published on

ಬ್ಯಾಡಗಿ: ಹೊಳೆ, ಕೆರೆ-ಕಟ್ಟೆಗಳಿಗೆ ನೀರು ತುಂಬಿದಾಗ ಗಂಗಾಪೂಜೆ ಮೂಲಕ ಬಾಗಿನ ಅರ್ಪಿಸುವ ಮೂಲಕ ಪರಿಸರವನ್ನು ಭಾವನಾತ್ಮಕವಾಗಿ ಪೂಜಿಸುವ ಸಂಪ್ರದಾಯ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿದೆ ಎಂದು ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಕಾಗಿನೆಲೆ ದೊಡ್ಡ ಕೆರೆಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಗಂಗಾಪೂಜೆ ಹಾಗೂ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಗಿನೆಲೆ ಕೆರೆಗೆ ವರದಾ ನದಿಯಿಂದ ನೀರು ತುಂಬಿದ್ದು, ಸುತ್ತಲಿನ ರೈತರು ಬೆಳೆಗೆ ಅನುಕೂಲವಾಗಿದೆ. ಕಾಗಿನೆಲೆ ಪ್ರವಾಸಿ ತಾಣವು ಆಗಿದೆ. ನಮ್ಮ ಹಿರಿಯರು ಪ್ರಕೃತಿಯಲ್ಲಿನ ಹಲವು ವೈಶಿಷ್ಟ್ಯ ಪೂಜಿಸುವ ಸಂಪ್ರದಾಯಕ್ಕೆ ನಾಂದಿ ಹಾಕಿ ಪರಿಸರ ಪ್ರೇಮದೊಂದಿಗೆ, ಉಳಿಸಿ ರಕ್ಷಿಸುವಲ್ಲಿ ಮುಂದಾಗಿದ್ದರು. ನಾವು ಸೀಗೆಹುಣ್ಣಿಮೆಯಲ್ಲಿ ಭೂತಾಯಿ, ಪಂಚಮಿಯಲ್ಲಿ ಹುತ್ತಕ್ಕೆ ಹಾಲೆರೆಯುವ, ದೀಪಾವಳಿಯಲ್ಲಿ ಗೋವುಗಳ ಪೂಜೆ, ಕಾಳುಗಳ ಒಕ್ಕಣಿಕೆ ಬಳಿಕ ಕಣದ ಪೂಜೆ, ನವರಾತ್ರಿಯಲ್ಲಿ ಬನ್ನಿಗಿಡ ಪೂಜೆ ಸೇರಿದಂತೆ ಪ್ರಕೃತಿಯಲ್ಲಿ ಎಲ್ಲ ಜೀವಚರಗಳು, ವಸ್ತುಗಳನ್ನು ಪೂಜಿಸುವ ಮೂಲಕ ನೆಮ್ಮದಿ ಕಂಡುಕೊಂಡಿದ್ದೇವೆ ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕಾಗಿನೆಲೆ ಕನಕ ಪ್ರಾಧಿಕಾರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ರಾಜ್ಯದಲ್ಲಿ ಉತ್ತಮ ಪ್ರವಾಸಿ ತಾಣವಾಗಿದೆ. ಈಗಾಗಲೇ ಕನದಾಸರ ಜೀವನ ಚರಿತ್ರೆಯ ಎಲ್ಲ ದೃಶ್ಯಗಳನ್ನು ಉದ್ಯಾನದಲ್ಲಿ ಅಳವಡಿಸಿ, ಅವರ ಸಾಹಿತ್ಯ ಬಂಡೆಯಲ್ಲಿ ಕೆತ್ತಿಸಲಾಗಿದೆ. ಕೆರೆಯಲ್ಲಿ ಬೋಟ್ ವ್ಯವಸ್ಥೆಗಾಗಿ ಎಲ್ಲ ಸಿದ್ಧತೆ ನಡೆದಿದೆ. ಬರುವ ದಿನಗಳಲ್ಲಿ ದಿನನಿತ್ಯ ಪ್ರವಾಸಿಗರು ಬಂದುಹೋಗಲು ವ್ಯವಸ್ಥೆ ಮಾಡಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಅಬ್ದುಲ್​ವುುನಾಫ್ ಎಲಿಗಾರ, ಈರನಗೌಡ್ರ ಪೊಲೀಸ್​ಪಾಟೀಲ, ಮಾರುತಿ ಅಚ್ಚಿಗೇರಿ, ವೀರನಗೌಡ್ರ ಪಾಟೀಲ, ಮಹೇಶಗೌಡ್ರ ಪಾಟೀಲ, ಪ್ರಭುಗೌಡ್ರ ಪಾಟೀಲ, ಮಲ್ಲೇಶಪ್ಪ ದೇಸಾಯಿ, ಗಿರೀಶ ಇಂಡಿಮಠ, ಪ್ರೇಮಾ ಜೋಗುಳ, ಶೈಲಾ ಹಿರೇಮಠ, ಗ್ರಾಪಂ ಪಿಡಿಒ ಎನ್. ಕಟ್ಟೆಗೌಡ್ರ, ಎಂ.ಎನ್. ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net