

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ಷ-ಕಿರಣ ವಿಭಾಗವು ಮನೋವೈದ್ಯಕೀಯ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ರೋಗ ಪತ್ತೆ ಹಚ್ಚುವಲ್ಲಿ ಮತ್ತು ಗುಣಪಡಿಸುವಲ್ಲಿ ಬೃಹತ್ ಕೊಡುಗೆ ನೀಡುತ್ತದೆ ಎಂದು ಎಸ್‌ಡಿಎಂ ವಿವಿ ಸಹ ಉಪ ಕುಲಪತಿ ಡಾ. ಎಸ್.ಕೆ. ಜೋಶಿ ಅಭಿಪ್ರಾಯಪಟ್ಟರು.
ನಗರದ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಮನೋರೋಗ ಶಾಸ್ತ್ರ ವಿಭಾಗ ವತಿಯಿಂದ ಕಾಲೇಜಿನ ಸಭಾಭವನದಲ್ಲಿ ಮನೋವೈದ್ಯಕೀಯ ಪುನರ್ವಸತಿ ಎಂಬ ವಿಷಯದ ಮೇಲೆ ಭಾನುವಾರ ಏರ್ಪಡಿಸಿದ್ದ 17ನೇ ವರ್ಷದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮನೋವೈದ್ಯಕೀಯ ರೋಗಿಗಳನ್ನು ಗುಣಪಡಿಸುವಲ್ಲಿ ಪ್ರಕೃತಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಜನರು ಮಾನಸಿಕ ಒತ್ತಡಕ್ಕೆ ಒಳಗಾದಾಗ ಸ್ವಯಂ ಪ್ರೇರಿತರಾಗಿ ಮನೋವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಸರಿಯಾಗಿ ರೋಗಿಗಳ ರೋಗ ನಿರ್ಣಯಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ. ದೀಪಕ ಕಣಬೂರ ಮಾತನಾಡಿ, ಶೈಕ್ಷಣಿಕ ಕಾರ್ಯಾಗಾರಗಳು ಆಧುನಿಕ ಜ್ಞಾನವನ್ನು ವೈದ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡುತ್ತದೆ. ವಿದ್ಯಾರ್ಥಿಗಳು ಸದಾ ಶಿಕ್ಷಕರ ಸಾಮಿಪ್ಯದಲ್ಲಿದ್ದು ಜ್ಞಾನ ಅರಿಯಬೇಕು ಎಂದರು.
ಡಾ. ಟಿ. ಮುರಳಿ, ಡಾ. ವಿಕ್ರಮ್‌ಸಿಂಗ್ ರಾವತ್, ಡಾ. ವಿನಾಯಕ ಕೋರ್ಪಡೆ, ಡಾ. ಕೃಷ್ಣ ಪ್ರಸಾದ ಸೇವಾನುಭವ ಮತ್ತು ತಜ್ಞ ಪ್ರಬಂಧಗಳನ್ನು ಮಂಡಿಸಿದರು. ಡಾ. ಅಭಯ ಮಟ್ಕರ ಸ್ವಾಗತಿಸಿದರು. ಡಾ. ತುಂಗಾ ನಿರೂಪಿಸಿದರು. ಡಾ. ಅನುರಾಧಾ ಎಸ್.ಎನ್. ವಂದಿಸಿದರು.