ಮಧುಗಿರಿ: ಒಂದು ಮರ ತಾಯಿಯ ಹೆಸರಿನಲ್ಲಿ ಎಂಬ ಶೀರ್ಷಿಕೆಯು ಅತ್ಯುತ್ತಮವಾಗಿದ್ದು, ತಾಯಿ ಮತ್ತು ಮಗುವಿನ ಸಂಬಂಧವನ್ನು ಸೂಚಿಸುತ್ತದೆ ಎಂದು ಉಪ ಲೋಕಾಯುಕ್ತ ಕೆ.ಎನ್.
ಫಣೀಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ತುಮಕೂರು ರಸ್ತೆಯ ಸಮೀಪವಿರುವ ನ್ಯಾಯಾಲಯಗಳ ಸಂಕೀರ್ಣಗಳ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಇವರ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಂದು ಮರ ತಾಯಿಯ ಹೆಸರಲ್ಲಿ, ವನಮಹೋತ್ಸವ ಹಾಗೂ ಪರಿಸರ ಜಾಗೃತಿ
ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿಯ ಉಸಿರು ನಿಂತರೆ ಮಗುವಿನ ಉಸಿರು ನಿಲ್ಲುತ್ತದೆ. ಮರ&ಗಿಡಗಳು ಪ್ರಾಣಿಗಳು ಬಿಟ್ಟಂತಹ ಕಾರ್ಬನ್ ಡೈ ಆಕ್ಸೆೃಡ್ನ್ನು ಅವು ಹೀರಿಕೊಂಡು ನಮಗೆ ಆಮ್ಲಜನಕವನ್ನು ನೀಡುತ್ತವೆ. ಈ ಆಮ್ಲಜನಕವೇ ಇಲ್ಲದೇ ಹೋದರೆ ನಾವುಗಳು ಬದುಕಲು ಸಾಧ್ಯವೇ?. ಆದ್ದರಿಂದ ತಾಯಿಗಿಂತ ಹೆಚ್ಚು ಬೆಲೆ ಕಟ್ಟಲಾಗದ ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಮೇಲೆ ಇದೆ ಎಂದು ತಿಳಿಸಿದರು. ಸರ್ಕಾರ ಹಾಗೂ ಅಧಿಕಾರಿಗಳ ರ್ನಿಲಕ್ಷ್ಯದಿಂದಾಗಿ ಹಾಗೂ ಜಾಗದ ಅಸಮತೋಲನ ಹಂಚಿಕೆಯಿಂದಾಗಿ ಅರಣ್ಯ ನಾಶವಾಗುತ್ತಿವೆ ಎಂಬ ಅನುಮಾನಗಳು ನಮಗೆ ಮೂಡುತ್ತಿವೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು
ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ನಿವೃತ್ತ ನ್ಯಾಯಮೂರ್ತಿ ಹಾಗೂ ಉಪ ಲೋಕಾಯುಕ್ತ ಬಿ.ವೀರಪ್ಪ ಮಾತನಾಡಿ, ಜಿಲ್ಲೆಯ ಕಾನೂನು ಸಲಹೆಗಳ ಪ್ರಾಧಿಕಾರವು ನಿದ್ದೆ ಮಾಡುತ್ತಿದ್ದು, ಶ್ರೀವೇ ಎಚ್ಚೆತ್ತುಕೊಳ್ಳಬೇಕಿದೆ. ನನ್ನ ಅವಧಿಯಲ್ಲಿ ಕಾನೂನು ಸಲಹೆಗಳ ಪ್ರಾಧಿಕಾರ ಪ್ರಥಮ ಸ್ಥಾನದಲ್ಲಿತ್ತು. ಆಗ ಜೈಲು, ಆಸ್ಪತ್ರೆ ಮತ್ತಿತರ ಸ್ಥಳಗಳಿಗೆ ಭೇಟಿ ಕೊಡಲಾಗುತ್ತಿತ್ತು. ಆದರೆ, ಇಂತಹ ಕಾರ್ಯಕ್ರಮಗಳಲ್ಲಿ ತಾವು ಭಾಗಿಯಾಗದಿರುವುದಕ್ಕೆ ಬೇಸರವಾಗುತ್ತಿದೆ. ಮುಂದಿನ ದಿನಗಳಲ್ಲಿ ಇಬ್ಬರು ಉಪ ಲೋಕಾಯುಕ್ತರು ಸೇರಿಕೊಂಡು 176 ತಾಲೂಕುಗಳಿಗೂ ಭೇಟಿ ನೀಡಲಾಗುವುದು ಎಂದು ತಿಳಿಸಿದರು.
ತಾಯಿಯನ್ನು ಪರಿಸರಕ್ಕೆ ಹೋಲಿಸಿರುವುದು ಉತ್ತಮ ಕಾರ್ಯಕ್ರಮವಾಗಿದೆ. ಆದರೆ, ಇಂದಿನ ದಿನಮಾನಗಳಲ್ಲಿ ಹೆತ್ತು ಹೊತ್ತು ನಮ್ಮನ್ನು ಪೋಷಿಸಿದ ತಾಯಿಯನ್ನು ಅಗೌರವದಿಂದ ಕಾಣುತ್ತಿರುವಂತಹ ವಾತವರಣವು ಶೇ.99 ರಷ್ಟು ಸೃಷ್ಟಿಯಾಗಿದೆ. ಒಂದು ಮರವನ್ನು ನಾವು ಪೋಷಿಸಿದರೆ ಆ ಮರವು ನಮ್ಮನ್ನು ಜೀವನ ಪರ್ಯಂತ ನಮ್ಮನ್ನು ಕಾಪಾಡುತ್ತದೆ ಎಂದರು.
ನ್ಯಾಯಮೂರ್ತಿ ಆರ್.ದೇವದಾಸ್ ಮಾತನಾಡಿ, ಸಸಿ ನೆಟ್ಟರೆ ಸಾಲದು, ಅವುಗಳ ಸಂರಕ್ಷಣೆಗೂ ಮುಂದಾಗಬೇಕು. ಮುಂದೊಂದು ದಿನ ಇದರ ಪ್ರತಿಫಲ ನಮಗೆ ದೊರೆಯುತ್ತದೆ. ಪ್ರಕೃತಿ ಸದಾ ಹಚ್ಚ ಹಸಿರಿನಿಂದ ಕೂಡಿರುವಂತೆ ಜಾಗ್ರತೆ ವಹಿಸಬೇಕು. ಪ್ರತಿ ದಿನವು ಸಸಿ ನೆಡುವ ಕೆಲಸವಾಗಬೇಕು ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ನ್ಯಾಯಾಧೀಶ ಎಂ.ಎಲ್.ರಘುನಾಥ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತಕುಮಾರ್, 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ
ಕೆ.ಯಾದವ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮ, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶಿರಾನ್ ತಾಜ್, ವಕೀಲರ ಸಂಘದ ಉಪಾಧ್ಯಕ್ಷ ಜಿ.ಮೂರ್ತಿ, ಪ್ರಧಾನ ಕಾರ್ಯದರ್ಶಿ ರಂಗನಾಥ್ ಇದ್ದರು.
ನಗರೀಕರಣ ಮತ್ತು ಕೃಷಿಕರಣದ ಉದ್ದೇಶದಿಂದ ಅರಣ್ಯದ ಒತ್ತುವರಿಯಾಗುತ್ತಿದ್ದು, ಇದರಿಂದ ಕಾಡು ಕಡಿಮೆಯಾಗುತ್ತಿದೆ. ಕೈಗಾರೀಕರಣ ಮತ್ತು ನಗರೀಕರಣ ಮಾಡಬಾರದೆಂಬ ಉದ್ದೇಶವಲ್ಲ ಆದರೆ ಎರಡು ಸಮತೋಲನದಲ್ಲಿರಬೇಕು. ಕಾಡಿಗೆ ಬೆಂಕಿ ಬಿದ್ದರೆ ನಮ್ಮ ಒಡಲಿಗೆ ಬೆಂಕಿ ಬಿದ್ದಂತೆ. ವಿಶೇಷವಾಗಿ ಸರ್ಕಾರವು ಸೇರಿದಂತೆ ಮಾನವನ ಕಾನೂನುಬಾಹಿರ ಚಟುವಟಿಕೆಗಳಿಂದಾಗಿ ಅತಿ ಹೆಚ್ಚು ಕಾಡು ನಾಶವಾಗುತ್ತಿದೆ. ಈ ಹಿಂದೆ ಕಾಡು ಮತ್ತು ನಾಡು ಇತ್ತು. ಈಗ ಕಾಡಿಗೆ ಮನುಷ್ಯರು ಹೋಗುತ್ತಿರುವುದರಿಂದ ಆ ಕಾಡಿನ ಪ್ರಾಣಿ ಸಂಕುಲ ನಾಡಿಗೆ ಮುಖ ಮಾಡುತ್ತಿವೆ. ಮನುಷ್ಯನು ತನ್ನ ಸ್ವಾರ್ಥ ಹಾಗೂ ದುರಾಸೆಯಿಂದಾಗಿ ಏನನ್ನು ಬೇಕಾದರೂ ನಾಶ ಮಾಡುವ ಪರಿಸ್ಥಿತಿಗೆ ಬಂದು ನಿಂತಿದ್ದಾನೆ ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಬೇಸರ ವ್ಯಕ್ತಪಡಿಸಿದರು.