ಹಾವೇರಿ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ... ಪ್ರಕೃತಿ ನೀಡಿದೆ ಎಚ್ಚರಿಕೆ....

BOREWELL
Published on

ಪಿ.ಎನ್. ಹೇಮಗಿರಿಮಠ ಗುತ್ತಲ

ಬೇಸಿಗೆಯಲ್ಲಿನ ಪ್ರಖರ ಬಿಸಿಲು ಹಾಗೂ ಮುಂಗಾರು ಮಳೆ ವಿಳಂಬದಿಂದಾಗಿ ಜಿಲ್ಲೆಯಲ್ಲಿ ಅಂರ್ತಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಇದು ರೈತರು ಸೇರಿದಂತೆ ಸಾರ್ವಜನಿಕರ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಭೂಮಿಯೊಳಗಿನ ನೀರಿನ ಮಟ್ಟ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲಿನ ನೀರಿನ ಮಟ್ಟವೂ ಕುಸಿತ ಕಂಡಿದೆ. ಕುಡಿಯುವ ನೀರಿನ ಇತರ ಮೂಲಗಳು ಬರಿದಾಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಆಡಳಿತಕ್ಕೆ ಬೋರ್​ವೆಲ್​ಗಳಲ್ಲಿ ಪೈಪ್​ಗಳನ್ನು ಇಳಿಸುವುದೇ ನಿತ್ಯದ ಕೆಲಸವಾಗಿದೆ.

ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಒಟ್ಟು 37 ಅಧ್ಯಯನ ಕೊಳವೆ ಬಾವಿ ಹಾಗೂ 5 ತೆರೆದ ಬಾವಿಗಳಿಂದ ಪ್ರತಿ ತಿಂಗಳು ಅಂತರ್ಜಜಲ ಮಟ್ಟ ಮಾಪನವನ್ನು ಆಧರಿಸಿ ನೀರಿನ ಮಟ್ಟವನ್ನು ಅಳೆಯಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಂತರ್ಜಲ ಮಟ್ಟ ಅತ್ಯಂತ ಕುಸಿತ ಕಂಡಿದ್ದು, ಪ್ರಸ್ತುತ ಜಿಲ್ಲೆಯ ಅಂತರ್ಜಲ ಮಟ್ಟ 17.3 ಮೀಟರ್​ಗೆ ಇಳಿದಿದೆ.

ಜೂನ್ ಆರಂಭದಲ್ಲಿಯೇ ಆಗಬೇಕಿದ್ದ ಮುಂಗಾರು ಮಳೆ ಇನ್ನೂ ಬಾರದ ಕಾರಣ ರೈತರು ಬೆಳೆಗಳಿಗೆ ಕೊಳವೆ ಬಾವಿಯ ಮೂಲಕ ನೀರುಣಿಸುತ್ತಿದ್ದಾರೆ. ಕೆರೆ, ಕಟ್ಟೆ, ಹಳ್ಳ, ಕೊಳ್ಳ, ನದಿಯಲ್ಲಿನ ನೀರು ಪ್ರಖರ ಬಿಸಿಲಿಗೆ ಆವಿಯಾಗಿದೆ. ಇದು ಅಂತರ್ಜಲ ಮಟ್ಟ ಕುಸಿಯಲು ಪ್ರಮುಖ ಕಾರಣವಾಗಿದೆ.

ಜಿಲ್ಲೆಯಲ್ಲಿ ಪ್ರಮುಖ ತುಂಗಭದ್ರಾ, ವರದಾ ಹಾಗೂ ಕುಮದ್ವತಿ ನದಿಗಳು ಹರಿದಿವೆಯಾದರೂ ಇವುಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರಾವರಿಗೆ ಸದ್ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಏತ ನೀರಾವರಿ ಯೋಜನೆಗಳಿದ್ದರೂ ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಚಾಲನೆಯಲ್ಲಿವೆ.

ಜಿಲ್ಲೆಯಲ್ಲಿ ಒಟ್ಟು 2058 ದೊಡ್ಡ, ಮಧ್ಯ ಹಾಗೂ ಸಣ್ಣಪುಟ್ಟ ಕೆರೆಗಳಿದ್ದು ಇದರಲ್ಲಿ 263 ಕೆರೆಗಳಿವೆ (40ರಿಂದ 2000 ಸಾವಿರ ಎಕರೆಗೆ ನೀರಾವರಿ ಒದಗಿಸುವ ಕೆರೆಗಳು). 98 ದೊಡ್ಡ ಕೆರೆಗಳು (2 ಸಾವಿರ ಹೆಕ್ಟೇರ್​ಗೂ ಮೇಲ್ಪಟ್ಟು ಜಮೀನಿಗೆ ನೀರಾವರಿ ಒದಗಿಸುವಂಥವು), ಸುಮಾರು 1697 ಸಣ್ಣ ಪುಟ್ಟ ಕೆರೆಗಳಿವೆ (40 ಹೆಕ್ಟೇರ್​ಗಿಂತ ಕಡಿಮೆ ನೀರಾವರಿ ಒದಗಿಸುವಂಥವು). ಇವುಗಳನ್ನು ಏತ ನೀರಾವರಿ ಯೋಜನೆಯ ಮೂಲಕ ತುಂಬಿಸಲಾಗುತ್ತಿದೆ. ಈ ಕೆರೆಗಳ ಹೂಳನ್ನು ಪ್ರತಿ ವರ್ಷ ಸರಿಯಾಗಿ ತೆಗೆಯದ ಕಾರಣ ನೀರು ಸಂಗ್ರಹವಾಗದೆ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ.

ರೈತರ ಜಮೀನುಗಳಿಗೆ ನೀರು ಸಂಗ್ರಹಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ತುಂಗಭದ್ರಾ ನದಿಗೆ ಹೊರತು ಪಡಿಸಿ ಉಳಿದ ನದಿಗಳಲ್ಲಿ ಬ್ಯಾರೇಜ್​ಗಳನ್ನು ನಿರ್ವಿುಸಲಾಗಿದೆ. ವರದಾ ನದಿಗೆ 14, ಧರ್ವ ನದಿಗೆ 16 ಹಾಗೂ ಕುಮದ್ವತಿ ನದಿಗೆ 9 ಬ್ಯಾರೇಜ್​ಗಳನ್ನು ನಿರ್ವಿುಸಲಾಗಿದೆ. ಆದರೆ, ಬ್ಯಾರೇಜ್​ಗಳ ನಿರ್ವಹಣೆ ಸರಿಯಾಗಿಲ್ಲದ ಕಾರಣ ನೀರು ತುಂಗಭದ್ರಾ ನದಿಗೆ ಸೇರಿ ಮುಂದೆ ಸಾಗುತ್ತದೆ.

ಕಳೆದ ವರ್ಷ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರ ಹಾಗೂ ಹಾವೇರಿ ತಾಲೂಕಿನಲ್ಲಿರುವ ತುಂಗಾ ಮೇಲ್ದಂಡೆಯ ನೀರು ಕಾಲುವೆಗಳಲ್ಲಿ ಸರಿಯಾಗಿ ಹರಿಯದೆ ಕೆರೆ ಕಟ್ಟೆಗಳು ಸಂಪೂರ್ಣವಾಗಿ ತುಂಬಲಿಲ್ಲ. ಅಂತರ್ಜಲ ಮಟ್ಟ ಏರಿಕೆಗೆ ಇಷ್ಟೆಲ್ಲ ಯೋಜನೆಗಳು ಜಾರಿಯಲ್ಲಿದ್ದರೂ ನೀರಿನ ಮಟ್ಟ ಕಡಿಮೆಯಾಗಿರುವುದು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ.

ಜೂನ್​ನಲ್ಲಿ 17.30 ಮೀಟರ್ ಕುಸಿತ

ಜಿಲ್ಲೆಯಲ್ಲಿ ಸರಾಸರಿ ಅಂತರ್ಜಲ ಮಟ್ಟ 2022ರ ಜನವರಿಯಲ್ಲಿ 7.81 ಮೀಟರ್ ಕುಸಿತ ಕಂಡಿದ್ದರೆ, ಇದೇ ವರ್ಷ ಜನವರಿಯಲ್ಲಿ 8.98 ಮೀಟರ್ ಕುಸಿತ ಕಂಡಿದೆ. ಜೂನ್ ತಿಂಗಳಲ್ಲಿ 17.30 ಮೀಟರ್ ಕುಸಿತವಾಗಿದೆ.

ರಟ್ಟಿಹಳ್ಳಿ ತಾಲೂಕಿನಲ್ಲಿ 26.53 ಮೀಟರ್ ಕುಸಿತವಾಗಿದ್ದರೆ, ಹಾವೇರಿ ತಾಲೂಕಿನಲ್ಲಿ 24.99 ಮೀಟರ್, ಹಿರೇಕೆರೂರು ತಾಲೂಕಿನಲ್ಲಿ 21.53 ಮೀಟರ್, ಹಾನಗಲ್ಲ 17.97 ಮೀ., ಬ್ಯಾಡಗಿ 13.56 ಮೀ., ಸವಣೂರ 13.54 ಮೀ., ರಾಣೆಬೆನ್ನೂರ 11.52 ಮೀ., ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 8.77 ಮೀಟರ್​ನಷ್ಟು ಅಂತರ್ಜಲ ಮಟ್ಟ ಕುಸಿತಗೊಂಡಿದೆ.

ಮಳೆ ಆಗದಿರುವುದು ಅಂತರ್ಜಲ ಮಟ್ಟ ಕಡಿಮೆಯಾಗಲು ಪ್ರಮುಖ ಕಾರಣ. ಕೆರೆ, ಕಟ್ಟೆ, ಹಳ್ಳ ಕೊಳ್ಳದಲ್ಲಿನ ನೀರು ಖಾಲಿಯಾಗಿದೆ. ಇದರಿಂದ ಅಂರ್ಜಲಮಟ್ಟ ಕುಸಿತ ಕಂಡಿದೆ. ಮಳೆ ನೀರು ಕೊಯ್ಲು, ಕೆರೆ ಕಟ್ಟಿ, ಹಳ್ಳ ಕೊಳ್ಳಗಳನ್ನು ಮಳೆಗಾಲದಲ್ಲಿ ತುಂಬಿಸಿಕೊಂಡರೆ ಅನುಕೂಲವಾಗುತ್ತದೆ. ರೈತರು ಹನಿ, ತುಂತುರು ನೀರಾವರಿ ಬಳಸಿಕೊಂಡು ಬೆಳೆ ಬೆಳೆಯಬೇಕು. ಆದಷ್ಟು ಕಡಿಮೆ ನೀರನ್ನು ಬಳಸುವಲ್ಲಿ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳು, ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕು. | ಸಂತೋಷ ಪ್ಯಾಟಿಗಾಣಗೇರ, ಹಿರಿಯ ಭೂಜ್ಞಾನಿ, ಹಾವೇರಿ- ಗದಗ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net