ಕುಂಜಾಡಿಯಲ್ಲಿ ನೈಸರ್ಗಿಕ ಆಕ್ಸಿಜನ್ ಪ್ಲಾಂಟ್

tree
Published on

ಕಡಬ: ಕೋವಿಡ್ ಸಂಕಷ್ಟ ಕಾಲದಲ್ಲಿ ದೇಶದಲ್ಲಿ ಸದ್ದು ಮಾಡಿದ್ದು ಆಮ್ಲಜನಕ ಕೊರತೆಯ ಸುದ್ದಿ. ಇಂತಹ ವಿಪ್ಲವಗಳನ್ನು ಎದುರಿಸುವ ಬದಲು ಪರಿಸರ ಸಂರಕ್ಷಣೆ, ಹೆಚ್ಚು ಮರ ಗಿಡಗಳನ್ನು ಬೆಳೆಸುವುದು ಸೂಕ್ತ ಎಂಬ ಅಭಿಪ್ರಾಯ ಎಲ್ಲರಿಂದ ಕೇಳಿಬಂದಿತ್ತು. ಇಲ್ಲೊಬ್ಬರು ಉಪನ್ಯಾಸಕರು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಹಾಗೂ ಪರಿಸರಾಸಕ್ತ ಉಪನ್ಯಾಸಕ ಡಾ.ಎಂ.ಕೆ.ಶ್ರೀಶ ಕುಮಾರ್ ಅವರು ಒಂದು ಎಕರೆ ಭೂಮಿ ಖರೀದಿಸಿ ಅಶ್ವತ್ಥಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಪದ್ಮಿನಿ ಅಶ್ವತ್ಥವನದಲ್ಲಿ ಅಶ್ವತ್ಥ ಗಿಡಗಳು ನಳನಳಿಸುತ್ತಿವೆ.

ಅಶ್ವತ್ಥಮರ ಬೆಳೆದು ವಿಶಾಲವಾಗಿ ಹರಡುವುದರಿಂದ ಪೂರ್ವಯೋಜಿತವಾಗಿ ಸುರಕ್ಷಿತ ಅಂತರದಲ್ಲಿ ಗಿಡ ನೆಟ್ಟಿದ್ದಾರೆ. ಜತೆಗೆ ಪಚ್ಚೆ ಕರ್ಪೂರ, ನಾಗಸಂಪಿಗೆ, ನಾಗ ಲಿಂಗ, ಗೋಳಿ, ನೆಲ್ಲಿ ಸೇರಿದಂತೆ ಸುಮಾರು 130 ಗಿಡಗಳನ್ನು ಬೆಳೆಸಿದ್ದಾರೆ. ಆಮ್ಲಜನಕ ಉತ್ಪಾದನೆಯಲ್ಲಿ ಅಶ್ವತ್ಥ ಗಿಡಕ್ಕೆ ಅಗ್ರಸ್ಥಾನವಿದೆ. ಗಿಡವೊಂದು ದಿನಕ್ಕೆ ಸುಮಾರು ಒಂದು ಸಾವಿರ ಜನರಿಗೆ ಬೇಕಾದ ಆಮ್ಲಜನಕ ಕೊಡಬಲ್ಲ ಸಾಮರ್ಥ್ಯ ಹೊಂದಿದೆ. ಇದು ಈ ಭಾಗದ ಜನತೆಗೆ ದೊಡ್ಡ ವರದಾನವಾಗಿದೆ.

ಮೂರು ವರ್ಷಗಳ ಹಿಂದೆ ನೆಟ್ಟ ಗಿಡಗಳು ಈಗ ಸಾಕಷ್ಟು ಬೆಳೆದಿವೆ. ಬೇಸಿಗೆಯಲ್ಲಿ ಪೈಪು ಮೂಲಕ ಗಿಡಗಳಿಗೆ ನೀರುಣಿಸಿ ಪೋಷಿಸಿದ್ದಾರೆ. ಟ್ಯಾಂಕರ್‌ನಲ್ಲೂ ನೀರು ತರಿಸಿ ಗಿಡಗಳಿಗೆ ಉಣಿಸಲಾಗಿದೆ.

ನುಡಿದಂತೆ ನಡೆದರು: ಡಾ.ಎಂ.ಕೆ.ಶ್ರೀಶ ಕುಮಾರ್ ಅವರು ಪಾಲ್ತಾಡಿ ಗ್ರಾಮದ ಮಂಜುನಾಥನಗರದಲ್ಲಿ ಮೂರು ವರ್ಷದ ಹಿಂದೆ ಅಶ್ವತ್ಥೋಪನಯನ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ಒಂದು ಎಕರೆ ಜಾಗ ಸ್ಥಳೀಯವಾಗಿ ದೊರೆತರೆ ಅಶ್ವತ್ಥವನ ನಿರ್ಮಿಸುವುದಾಗಿ ಹೇಳಿದ್ದರು. ಇದರಂತೆ ಪಾಲ್ತಾಡಿ ಗ್ರಾಮವಿಕಾಸ ಸಮಿತಿಯ ಅಧ್ಯಕ್ಷರಾಗಿದ್ದ, ಪ್ರಸ್ತುತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮಾಂತರ ಸಂಘಚಾಲಕ ಸುಧಾಕರ ರೈ ಕುಂಜಾಡಿ ಅವರು ಶ್ರೀಶ ಕುಮಾರ್ ಅವರಿಗೆ ಜಾಗ ನೀಡಲು ಮುಂದಾದರು. ನಂತರ ಖರೀದಿಸಿ ವನ ನಿರ್ಮಿಸಿ ನುಡಿದಂತೆ ನಡೆದಿದ್ದಾರೆ.

ಒಂದು ಎಕರೆ ಜಾಗದಲ್ಲಿ ಸುಮಾರು 130 ಗಿಡಗಳನ್ನು ಬೆಳೆಸಲಾಗಿದೆ, ಮುಂದಿನ ಐದರಿಂದ ಆರು ವರ್ಷಗಳಲ್ಲಿ ಕುಂಜಾಡಿಯ ಪದ್ಮನಿ ಅಶ್ವತ್ಥವನ ಅತಿ ಹೆಚ್ಚು ಆಮ್ಲಜನಕ ಇರುವ ತಾಣವಾಗಲಿದೆ. ಡಾ.ಶ್ರೀಶ ಕುಮಾರ್, ಉಪನ್ಯಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net