

ವೇಣುವಿನೋದ್ ಕೆ.ಎಸ್. ಮಂಗಳೂರು
ಕೊಚ್ಚಿನ್‌ನಿಂದ ಗೈಲ್ ಪೈಪ್‌ಲೈನ್‌ನಲ್ಲಿ ನೈಸರ್ಗಿಕ ಅನಿಲ ಇದೇ ಸೋಮವಾರ (ನ.23) ಮಂಗಳೂರಿಗೆ ತಲುಪುವ ಮಾಹಿತಿ ‘ವಿಜಯವಾಣಿ’ಗೆ ಲಭಿಸಿದೆ.
ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಆವರಣದಲ್ಲೇ ಅನಿಲ ಸ್ವೀಕರಣಾ ಸ್ಟೇಷನ್ ಸ್ಥಾಪಿಸಲಾಗಿದ್ದು, ಇಲ್ಲಿಂದಲೇ ಇತರೆಡೆ ಅನಿಲ ಪೂರೈಕೆಯಾಗುತ್ತದೆ. ಅನಿಲ ಸ್ವೀಕರಣೆಯಾದರೆ ಮೊದಲ ಗ್ರಾಹಕ ಸಂಸ್ಥೆಯೂ ಎಂಸಿಎಫ್ ಆಗಿರುತ್ತದೆ. ಇದಕ್ಕಾಗಿ ಎಂಸಿಎಫ್ ತನ್ನ ಸ್ಥಾವರವನ್ನು ಗ್ಯಾಸ್ ಆಧರಿತವಾಗಿ ಪರಿವರ್ತಿಸಿಕೊಂಡು ಕಾಯುತ್ತಿದೆ. ಸೋಮವಾರ ಇಲ್ಲಿ ಗ್ಯಾಸ್ ಸ್ವೀಕರಣಾ ಕಾರ್ಯಕ್ರಮವನ್ನು ಪೂಜೆ ಸಹಿತ ನೆರವೇರಿಸಲು ಸಿದ್ಧತೆಯನ್ನೂ ನಡೆಸಲಾಗಿದೆ.
ಎಂಆರ್‌ಪಿಎಲ್, ಒಎಂಪಿಎಲ್ ಕೂಡ ಅನಿಲ ಪಡೆಯಲು ಗೈಲ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದರೂ, ಪೂರಕ ವ್ಯವಸ್ಥೆಗಳು ಇನ್ನಷ್ಟೇ ಆಗಬೇಕಿದೆ. ಗ್ಯಾಸ್ ಮಂಗಳೂರಿಗೆ ತಲುಪಿದ ಬಳಿಕ ಇತರ ಕೈಗಾರಿಕೆಗಳೂ ನೈಸರ್ಗಿಕ ಅನಿಲ ಬಳಕೆಯತ್ತ ಒಲವು ತೋರಿಸುವ ನಿರೀಕ್ಷೆಗಳಿವೆ.
ವಾರದ ಹಿಂದಷ್ಟೇ ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿ ಕ್ಲಿಷ್ಟಕರವಾಗಿದ್ದ ಪೈಪ್ ಅಳವಡಿಕೆ ಕಾರ್ಯ ಮುಗಿದಿತ್ತು. ಇದರೊಂದಿಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಬಳಿಕ ಪ್ರಯೋಗಾರ್ಥ ಗ್ಯಾಸ್ ಪೂರೈಕೆಯೂ ಯಶಸ್ವಿಯಾಗಿ ನಡೆದಿದೆ. ಇದೀಗ ನೈಸರ್ಗಿಕ ಅನಿಲವನ್ನು ಬಳಸಿ ಎಂಸಿಎಫ್ ಕಾರ್ಯಚಟುವಟಿಕೆ ನಡೆಸಲು ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಪೈಪ್‌ಲೈನ್ ಅಧಿಕೃತ ಕಮಿಷನಿಂಗ್ ನಡೆಯುವ ನಿರೀಕ್ಷೆಗಳಿವೆ.
2009ರಲ್ಲಿ 2915 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿದ್ದ 444 ಕಿ.ಮೀ ಉದ್ದದ ಪೈಪ್‌ಲೈನ್ ಕೆಲಸ ಭೂಸ್ವಾಧೀನ ವಿಳಂಬದಿಂದಾಗಿ ಯೋಜನಾ ವೆಚ್ಚ 5,750 ಕೋಟಿ ರೂ.ಗಳಿಗೆ ಏರಿಕೆ ಕಂಡಿತ್ತು.
ಆರು ತಿಂಗಳಲ್ಲಿ ಮನೆ ಮನೆಗೆ ಗ್ಯಾಸ್: ನೈಸರ್ಗಿಕ ಅನಿಲ ಪೂರೈಕೆಗೆ ಕ್ಷಣಗಣನೆ ಆರಂಭಗೊಂಡಿರುವಾಗಲೇ ಮಂಗಳೂರು ನಗರದಲ್ಲಿ ಮನೆ ಮನೆಗೆ ಗ್ಯಾಸ್(ಸಿಜಿಡಿ) ಪೂರೈಸುವ ಕೆಲಸಗಳು ಚುರುಕು ಪಡೆದಿವೆ. ಪ್ರಕ್ರಿಯೆ ಈಗಾಗಲೇ ವಿಳಂಬವಾಗಿರುವುದರಿಂದ ಮನೆಗಳಿಗೆ ಗ್ಯಾಸ್ ತಲುಪಲು ಆರು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ನಗರದಲ್ಲಿ ಈಗಾಗಲೇ 3300 ಮನೆಗಳಿಗೆ ಸಿಜಿಡಿ ಸಂಪರ್ಕದ ಕೆಲಸ ಮುಗಿದಿದೆ. 32 ಸಾವಿರ ಮಂದಿ ಸಂಪರ್ಕಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ ಅನುಮತಿ ದೊರೆತಿರುವ ಪಾಲಿಕೆ ವ್ಯಾಪ್ತಿಯ 6 ವಾರ್ಡ್‌ಗಳಲ್ಲಿ ವಿತರಣಾ ಪೈಪ್‌ಲೈನ್ ಅಳವಡಿಕೆ ಪ್ರಗತಿಯಲ್ಲಿದೆ.
ಸಿಜಿಡಿ ವಿತರಣೆಗೆ 125 ಎಂಎಂನಿಂದ 20 ಎಂಎಂ ವರೆಗಿನ ಎಂಡಿಪಿಇ ಪೈಪ್ ಹಾಕಲಾಗುತ್ತದೆ. ಅದಕ್ಕೆ ಕನಿಷ್ಠ 1 ಮೀಟರ್ ಆಳ 2 ಅಡಿ ಅಗಲವಷ್ಟೇ ಅಗೆದರೆ ಸಾಕಾಗುತ್ತದೆ. ನೋಡಿಕೊಂಡು ಅಗತ್ಯವಿದ್ದಲ್ಲಿ ಪೈಪ್ ಹಾಕುವ ಯಂತ್ರ ಅಥವಾ ಮ್ಯಾನ್ಯುವಲ್ ಆಗಿ ಅಗೆದು ಪೈಪ್ ಅಳವಡಿಸಲಾಗುತ್ತದೆ.
ಮಂಗಳೂರಿನ ಅರ್ಕುಳದಿಂದ ಸುರತ್ಕಲ್‌ವರೆಗೆ ಗ್ಯಾಸ್ ವಿತರಣೆಗಾಗಿ ಹೆದ್ದಾರಿ ಬದಿಯಲ್ಲಿ 18 ಇಂಚಿನ ವ್ಯಾಸದ ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 27 ಕಿ.ಮೀ.ನಲ್ಲಿ 10 ಕಿ.ಮೀ.ಗೆ ಅನುಮತಿ ಸಿಕ್ಕಿದ್ದರೆ, 17 ಕಿ.ಮೀ.ಗೆ ಅನುಮತಿ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ.
ತಕ್ಷಣ ಅಸಾಧ್ಯ: ಮಂಗಳೂರಿಗೆ ಗ್ಯಾಸ್ ತಲುಪಿದರೂ ನಗರದಲ್ಲಿ ಮನೆಮನೆಗಳಿಗೆ ತಕ್ಷಣ ಪೂರೈಕೆ ಮಾಡುವುದು ಸಾಧ್ಯವಿಲ್ಲ. ಮನಪಾದಿಂದ ಅನುಮತಿ ಪ್ರಕ್ರಿಯೆ ದೀರ್ಘವಾಗಿದ್ದು, ವಿತರಣಾ ಜಾಲ ಹಾಕುವ ಕೆಲಸ ಪ್ರಗತಿಯಲ್ಲಿದೆ. ಇನ್ನೂ ಆರು ತಿಂಗಳು ಬೇಕಾಗಬಹುದು ಎನ್ನುತ್ತಾರೆ ಗೈಲ್ ಗ್ಯಾಸ್‌ನ ಮಹಾಪ್ರಬಂಧಕ ವಿಲಿನ್ ಝುಂಕೆ.
ತಿಂಗಳೊಳಗೆ ಸಿಎನ್‌ಜಿ ಸ್ಟೇಷನ್ ಆರಂಭ: ಡಿಸೆಂಬರ್ ಅಂತ್ಯದೊಳಗೆ ಕನಿಷ್ಠ 5 ಸಿಎನ್‌ಜಿ (ಸಂಕುಚಿತ ನೈಸರ್ಗಿಕ ಅನಿಲ) ಸ್ಟೇಷನ್ ಕಾರ್ಯಾರಂಭಿಸಲಿವೆ. ಹಳೆಯಂಗಡಿ, ಕೊಟ್ಟಾರ, ಪಡೀಲ್, ಪಣಂಬೂರು, ಸುರತ್ಕಲ್‌ಗಳಲ್ಲಿ ಗ್ಯಾಸ್ ಸ್ಟೇಷನ್ ಕಾರ್ಯಾರಂಭಿಸಲಿದ್ದು, ಜನರು ಕಡಿಮೆ ಮಾಲಿನ್ಯದ ಗ್ಯಾಸ್ ಬಳಸಿಕೊಳ್ಳಬಹುದು. ಇನ್ನೂ ಸಿಜಿಡಿ ಪೈಪ್‌ಲೈನ್ ಪೂರ್ಣಗೊಳ್ಳದ ಕಾರಣ ಸದ್ಯಕ್ಕೆ ಅನಿಲವನ್ನು ವಾಹನದಲ್ಲಿ ತುಂಬಿಸಿ ಸ್ಟೇಷನ್‌ಗಳಿಗೆ ಪೂರೈಸಲಾಗುತ್ತದೆ.
ಮಂಗಳೂರಿನಲ್ಲಿ ಮನೆ ಮನೆ ಗ್ಯಾಸ್‌ಗೆ ಉತ್ತಮ ಸ್ಪಂದನೆ ಇದೆ. ಉಚಿತವಾಗಿ ನೋಂದಣಿ ಹಾಗೂ ಸಂಪರ್ಕ ನೀಡಲಾಗುತ್ತಿದೆ. ಅನಿಲ ಪೂರೈಕೆ ಶುರುವಾದರೆ ಈಗಿರುವ ಎಲ್‌ಪಿಜಿ ಸಿಲಿಂಡರ್‌ಗೆ ಹೋಲಿಸಿದರೆ ದರ ಶೇ.30-40ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಹಾಗಾಗಿ ಇದು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಪೈಪ್ ಗ್ಯಾಸ್ ನೀರಿನ ಮಾದರಿಯಲ್ಲೇ ಮೀಟರ್ಡ್ ಸಂಪರ್ಕವಾಗಿರುತ್ತದೆ, ಎರಡು ತಿಂಗಳಿಗೊಮ್ಮೆ ಖರ್ಚಾದ ಗ್ಯಾಸ್‌ಗೆ ಇಂತಿಷ್ಟು ಎಂದು ಬಿಲ್ ಪಾವತಿಸುವ ನಾಗರಿಕ ಸ್ನೇಹಿ ಉಪಕ್ರಮವಾಗಿರುತ್ತದೆ. - ವಿಲೀನ್ ಝುಂಕೆ, ಗೈಲ್ ಗ್ಯಾಸ್‌ನ ಮಹಾಪ್ರಬಂಧಕ