ನೆರೆ ಹಾವಳಿ, ಪ್ರಕೃತಿ ವಿಕೋಪ ತಡೆ ಕಲ್ಪಿತ ಪ್ರದರ್ಶನ

hnl
Published on

ಹೊನ್ನಾಳಿ: ನೆರೆ ಹಾವಳಿ, ಪ್ರಕೃತಿ ವಿಕೋಪ, ಪ್ರವಾಹದಲ್ಲಿ ಸಿಲುಕಿದಾಗ ಸಂದರ್ಭ ಹೇಗೆ ರಕ್ಷಿಸಬೇಕು ಹಾಗೂ ಸ್ವಯಂಕೃತವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಎಸ್‌ಡಿಆರ್‌ಎಫ್ ತಂಡ ಸಾರ್ವಜನಿಕರ ಮುಂದೆ ಕಲ್ಪಿತ ಪ್ರದರ್ಶನದ ಮೂಲಕ ಅರಿವು ಮೂಡಿಸಿತು.

ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದ ಬಳಿಯ ತುಂಗಭದ್ರಾ ನದಿಯಲ್ಲಿ ಮಂಗಳವಾರ 2 ಗಂಟೆಗಳ ಕಾಲ ಕಲ್ಪಿತ ಪ್ರದರ್ಶನ ನೀಡಲಾಯಿತು.
ವಿಪತ್ತಿನ ಸಂದರ್ಭದಲ್ಲಿ ನದಿ ನೀರು ಉಕ್ಕಿ ಪ್ರವಾಹದಲ್ಲಿ ಸಿಲುಕಿದಾಗ ಅವರನ್ನು ಹೇಗೆ ರಕ್ಷಣೆ ಮಾಡಬೇಕೆಂದು ತಂಡ ರಕ್ಷಣಾ ಪರಿಕರಗಳ ಪೂರ್ವ ತಯಾರಿ ಮಾಡಿಕೊಂಡು ನದಿಯಲ್ಲಿ ಬೋಟ್ ಹಾಗೂ ಈಜುವ ಮೂಲಕ ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, ಪ್ರಕೃತಿ ವಿಕೋಪ ತಡೆಯಲು ಅಸಾಧ್ಯವಾದರೂ ಅವುಗಳ ಬಗ್ಗೆ ಅರಿವು ಇದ್ದರೆ ಜೀವ ಹಾಗೂ ಆಸ್ತಿಯ ಹಾನಿ ತಡೆಯಬಹುದು. ಇದಕ್ಕೆ ವಿವಿಧ ಇಲಾಖೆಗಳು ಇದ್ದರೂ ಸಾರ್ವಜನಿಕರು ಕೈ ಜೋಡಿಸದಿದ್ದರೆ ವಿಪತ್ತು ತಪ್ಪಿಸಲು ಅಸಾಧ್ಯ ಎಂದು ತಿಳಿಸಿದರು.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸ್ಥಿತಿ ಇರುವುದರಿಂದ ನದಿ ಪಾತ್ರದ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ ನೇತೃತ್ವದಲ್ಲಿ ಎಸ್‌ಡಿಆರ್‌ಎಫ್ ತಂಡದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದೇವೆ ಎಂದು ವಿವರಿಸಿದರು.

ಎಸ್‌ಡಿಆರ್‌ಎಫ್‌ನ ಡೆಪ್ಯೂಟಿ ಕಮಾಂಡೆಂಟ್ ಹೇಮಕುಮಾರ್ ಮಾತನಾಡಿ, ನೆರೆಹಾವಳಿಯಂತಹ ವಿಷಮ ಪರಿಸ್ಥಿತಿಯಲ್ಲಿ ಎಲ್ಲರ ಸಹಕಾರ ಮುಖ್ಯ. ಇದು ಇಲಾಖೆ ಕೆಲಸ ಎಂದು ಕೈಕಟ್ಟಿ ಕೂರಬಾರದು. ನದಿಯಲ್ಲಿ ಸಿಲುಕಿಕೊಂಡವರನ್ನು ಹೇಗೆ ರಕ್ಷಣೆ ಮಾಡಬಹುದು? ಎಂಬುದನ್ನು ಯುವ ಉತ್ಸಾಹಿಗಳು ತಿಳಿದುಕೊಳ್ಳಬೇಕು ಎಂದರು.

ಜಿಪಂ ಸಿಇಒ ವೆಂಕಟೇಶ್ ಇಟ್ನಾಳ್, ಡಿಎಚ್‌ಒ ಷಣ್ಮುಖಪ್ಪ, ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್, ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ, ತಾಪಂ ಇಒ ರಾಘವೇಂದ್ರ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ನ್ಯಾಮತಿ ಜಗಳೂರು ತಹಸೀಲ್ದಾರ್ ಫಿರೋಜ್ ಷಾ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಪಿಐ ರವಿಕುಮಾರ್, ಹೊನ್ನಾಳಿ ಎಎಸ್‌ಐ ತಿಪ್ಪೇಸ್ವಾಮಿ, ಗ್ರೇಡ್ 2 ತಹಸೀಲ್ದಾರ್ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net