

ಚನ್ನಗಿರಿ: ಮುಂಗಾರು ಹಾಗೂ ಹಿಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಕೃತಿ ವಿಕೋಪ ತಡೆಗೆ ತಾಲೂಕಿನಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಲಾಗುತ್ತಿದೆೆ ಎಂದು ತಹಸೀಲ್ದಾರ್ ಪಿ.ಎಸ್. ಯರ‌್ರಿಸ್ವಾಮಿ ತಿಳಿಸಿದರು.
ಪ್ರಕೃತಿ ವಿಕೋಪದಡಿ ಆಗುವ ಅನಾಹುತ ತಪ್ಪಿಸುವ ಸಂಬಂಧ ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
2022ರಲ್ಲಿ ಅತಿವೃಷ್ಠಿಯಿಂದ 964 ಮನೆಗಳು ಬಿದ್ದಿದ್ದವು. ಅರ್ಹರಿಗೆ 7.40 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.ತಾಲೂಕಿನ ವಿವಿಧೆಡೆ ಕಾಳಜಿ ಕೇಂದ್ರ ಪ್ರಾರಂಭಿಸುವ ಮೂಲಕ ಜನರ ರಕ್ಷಣೆ ಮಾಡಲಾಗಿತ್ತು.ಈ ಸಾಲಿನಲ್ಲಿ ಮಳೆಯಿಂದ ಅವಘಡ ಸಂಭವಿಸದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ 61 ಗ್ರಾಪಂಗಳಿವೆ. ಎರಡು ಗ್ರಾಪಂಗಳಿಗೆ ಒಬ್ಬರು ನೋಡಲ್ ಅಧಿಕಾರಿ ನೇಮಿಸಲಾಗುವುದು. ಯಾವುದೇ ಗ್ರಾಮದಲ್ಲಿ ಅನಾಹುತ ಸಂಭವಿ ಸಿದರೆ ತಕ್ಷಣ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದು ಸಂಬಂಧಿಸಿದ ಅಧಿಕಾರಿಗಳಿಗೆ ಕಳೂಹಿಸಬೇಕು ಎಂದರು.
ಅವಶ್ಯಕತೆ ಇದ್ದ ಕಡೆ ಕಾಳಜಿ ಕೇಂದ್ರ ತೆರೆಯಲು ಅನುಮೋದನೆ ಪಡೆಯಬೇಕು. ನುರಿತ ಈಜುಗಾರರು, ಹಾವು ಹಿಡಿಯುವವರು ,ತೆಪ್ಪ ನಡೆಸುವವರ ಪೋನ್ ನಂಬರ್ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಮನೆಗಳು ಬೀಳುವಂತ ಸ್ಥಿತಿಯಲ್ಲಿ ಇದ್ದರೆ ಕುಟುಂಬದವರನ್ನು ಹತ್ತಿರದ ಶಾಲೆ ಅಥವಾ ವಸತಿ ಶಾಲೆಗಳಿಗೆ ಸ್ಥಳಾಂರಿಸಲು ಸಲಹೆ ನೀಡಿದರು.
ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಎಂ.ಅರ್. ಪ್ರಕಾಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್, ವೈದ್ಯಾಧಿಕಾರಿ ಶಿವಕುಮಾರ್, ಕೃಷಿ ಸಹಾಯಕ ನಿರ್ದೇಶಕ ಅರುಣ್ ಗುನ್ನಾ, ಜಿಪಂ ಇಂಜಿನಿಯರಿಂಗ್ ಇಲಾಖೆಯ ಎಇಇ ಹೇಮೋಜಿ ನಾಯ್ಕ ಇದ್ದರು.