

ನರಗುಂದ: ಯುವ ಪೀಳಿಗೆಗಾಗಿ ಪ್ರತಿಯೊಬ್ಬರೂ ಮನೆಗೊಂದು ಮರ, ಊರಿಗೊಂದು ವನ ನಿರ್ಮಿಸುವ ಸಂಕಲ್ಪ ಮಾಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕ್ಷೇತ್ರ ಯೋಜನಾಧಿಕಾರಿ ಜಗದೀಶ ಬಿ. ಹೇಳಿದರು.
ತಾಲೂಕಿನ ಶಿರೋಳ ವಲಯದ ಗಾಡಗೋಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಸ್ವಾರ್ಥಕ್ಕಾಗಿ ನಿರಂತರವಾಗಿ ಗಿಡ, ಮರಗಳನ್ನು ಕಡಿದು ಅರಣ್ಯನಾಶಪಡಿಸುತ್ತಿರುವುದರಿಂದ ಅದರ ದುಷ್ಪರಿಣಾಮ ಎದುರಿಸುವಂತಾಗಿದೆ ಎಂದರು.
ಮುಖ್ಯೋಪಾಧ್ಯಾಯ ಎಂ.ಡಿ. ಗಾಡಗೋಳಿ ಮಾತನಾಡಿ, ಸುತ್ತಲಿನ ಪರಿಸರ ಜೈವಿಕವಾಗಿರಬೇಕು. ಆದರೆ, ಪರಿಸರದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪರಿಸರ ಜಾಗೃತಿ, ಚಿತ್ರಕಲಾ, ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿನಿ ಸಾನಿಯಾ ನದಾಫ ಪರಿಸರ ಸಂರಕ್ಷಣೆ ಕುರಿತು ಭಾಷಣ ಮಾಡಿದರು. ಎಲ್.ಎಂ. ಪಾಟೀಲ, ಯಲ್ಲವ್ವ ತಳವಾರ, ಸವಿತಾ ತಳವಾರ, ವೀರಣ್ಣ ಬೀಳಗಿ, ಫಕ್ರುಸಾಬ್, ನರೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಗುಡ್ಡಾಚಾರಿ ಬಡಿಗೇರ, ಸೇವಾ ಪ್ರತಿನಿಧಿ ರೇಣುಕಾ, ಇತರರಿದ್ದರು.