ಉಡುಪಿ ಕೃಷ್ಣಮಠಕ್ಕೆ ನೈಸರ್ಗಿಕ ಬಣ್ಣದ ಲೇಪ, ಪೊಡವಿಗೊಡೆಯನ ಸನ್ನಿಧಿಗೆ ಸಾಂಪ್ರದಾಯಿಕ ಲುಕ್

mutt
Published on

- ಗೋಪಾಲಕೃಷ್ಣ ಪಾದೂರು ಉಡುಪಿ

ಕೆಂಪು ಮಣ್ಣು, ಗೋಪಿಚಂದನ, ಸಗಣಿ, ಗೋಂದ್ ಅಂಟು ಹೀಗೆ ನಮ್ಮ ಸುತ್ತಮುತ್ತ ದೊರಕುವ ವಸ್ತುಗಳಿಂದಲೇ ತಯಾರಿಸಿದ ನೈಸರ್ಗಿಕ ಬಣ್ಣಗಳಿಂದ ಕೃಷ್ಣ ಮಠ ಕಂಗೊಳಿಸಲಿದ್ದು, ಸಾಂಪ್ರದಾಯಿಕ ಲುಕ್ ಮಠದ ಪರಿಸರಕ್ಕೆ ಹೊಸ ಮೆರುಗು ನೀಡಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷ್ಣ ಮಠಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಈ ಸಂದರ್ಭವನ್ನು ಸದುಪಯೋಗಿಸಿಕೊಂಡು ಭೋಜನಶಾಲೆ, ಬಡಗುಮಾಳಿಗೆ, ಗೋ ಶಾಲೆ, ಕನಕ ಮಂಟಪ, ಮಧ್ವ ಮಂಟಪ, ಅನ್ನಬ್ರಹ್ಮ ಭೋಜನಶಾಲೆ ಮೊದಲಾದ ಕಡೆ ಒಳಾಂಗಣಕ್ಕೆ ಸಹಜ ಬಣ್ಣಗಳನ್ನು ಬಳಿಯಲಾಗುತ್ತಿದೆ. ಹಿರಿಯ ಕಲಾವಿದ ಪುರುಷೋತ್ತಮ ಅಡ್ವೆ ಮಾರ್ಗದರ್ಶನದಲ್ಲಿ 28 ಮಂದಿ ಕುಶಲಕರ್ಮಿಗಳು ಕಳೆದ 1 ತಿಂಗಳಿನಿಂದ ಬಣ್ಣ ತಯಾರಿಸಿ, ಗೋಡೆಗಳಿಗೆ ಹಚ್ಚುವ ಕೆಲಸ ನಿರ್ವಹಿಸುತ್ತಿದ್ದು, ಇದಕ್ಕಾಗಿ ಮಠದಿಂದ 23 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ.

ಶೇ.70 ಉಳಿತಾಯ: ಮಾರುಕಟ್ಟೆಯಲ್ಲಿ ದೊರಕುವ ಬಣ್ಣಗಳಿಗೆ ಹೋಲಿಸಿದರೆ ನೈಸರ್ಗಿಕ ಬಣ್ಣಗಳು ಸಹಜ ಸೌಂದರ್ಯವನ್ನು ಹೊಂದಿದ್ದು, ಖರ್ಚುವೆಚ್ಚದಲ್ಲಿ ಶೇ.70ರಷ್ಟು ಉಳಿತಾಯವಾಗಲಿದೆ. ಸುಮಾರು 200 ಲೀ. ಬಣ್ಣ ತಯಾರಿಸಲು 20 ಕೆಜಿ ಸೆಗಣಿ, 30 ಕೆಜಿ ಸೋಸಿದ ಮಣ್ಣು, 10 ಕೆಜಿ ಗೋಪಿ, 5 ಕೆ.ಜಿ ಗೋಂದ್ ಅವಶ್ಯಕತೆ ಇದೆ. ಬಣ್ಣಗಳಲ್ಲೂ ವೈವಿಧ್ಯತೆಗಳಿದ್ದು, ಹಳದಿ ಬಣ್ಣಕ್ಕೆ ಹಳದಿ ಮಣ್ಣು, ಬಿಳಿ ಬಣ್ಣಕ್ಕೆ ಶೇಡಿ ಮಣ್ಣು, ಬೂದು ಮಣ್ಣುಗಳೂ ಲಭ್ಯ ಇವೆ. ಜತೆಗೆ ಗರ್ಗ, ದಾಸವಾಳ ಸೊಪ್ಪು ಸೇರಿಸಿ ಹಸಿರು ಎಲೆ ಬಣ್ಣವನ್ನೂ ತಯಾರಿಸಬಹುದು.

ಪ್ರತೀ ಪರ್ಯಾಯ ಸಂದರ್ಭದಲ್ಲಿ ಮಠಕ್ಕೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತದೆ. ಈ ಬಾರಿ ಬಣ್ಣ ಕೊಡುವ ಕೆಲಸ ನಿಧಾನಕ್ಕೆ ಮಾಡಲು ಯೋಚಿಸಲಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದಷ್ಟು ಮಂದಿ ಕಾರ್ಮಿಕರಿಗೆ ಇದರಿಂದ ಉದ್ಯೋಗವೂ ದೊರೆತಂತಾಗಿದೆ. ಹಿರಿಯರ ಬದುಕಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಚಿಂತನೆಗೆ ಪೂರಕವಾಗಿ ನೈಸರ್ಗಿಕ ಬಣ್ಣಗಳನ್ನು ಒಳಾಂಗಣಕ್ಕೆ ಉಪಯೋಗಿಸಲಾಗಿದೆ. ಹೆಚ್ಚು ಮಳೆ ಬೀಳುವ ಕಡೆಗಳಲ್ಲಿ ಮಾರುಕಟ್ಟೆಯ ಬಣ್ಣಗಳನ್ನು ನೀಡಲಾಗಿದೆ. - ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪರ್ಯಾಯ ಅದಮಾರು ಮಠ, ಕೃಷ್ಣ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net