ಸ್ಥಳೀಯ ಚುನಾವಣೆ ಗೆಲುವಿಗೆ ಸಂಘಟಿತ ಹೋರಾಟ ಎಂದ ಮಾಡಾಳು

202
Published on

ಚನ್ನಗಿರಿ: ಚನ್ನಗಿರಿ ಸೇರಿದಂತೆ ಎಲ್ಲ ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದು ಕೆಎಸ್‌ಡಿಎಲ್ ಮಾಜಿ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ಪಟ್ಟಣದ ಶ್ರೀ ಮೌದ್ಗಲ್ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಜಯಗಳಿಸಿದ ಎಸ್.ಎಲ್. ಭೋಜೇಗೌಡ ಮತ್ತು ಡಾ.ಧನಂಜಯ ಸರ್ಜಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.

ಮೊದಲ ಬಾರಿಗೆ ಶಾಸಕನಾಗಿದ್ದ ಸಂದರ್ಭ ಉಬ್ರಾಣಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ತಾಲೂಕಿನ ಕೆರೆಗೆ ನೀರನ್ನು ತುಂಬಿಸುವ ಕೆಲಸ ಪೂರ್ಣ ಮಾಡಲಾಗಿತ್ತು. ಇಂದು ತಾಲೂಕಿನ ಕೆರೆಗಳು ಬರಿದಾಗಿವೆ. ಯೋಜನೆಯ ಮುಖ್ಯ ಪೈಪ್‌ಲೈನ್‌ಗೆ ಸಬ್ ಪೈಪ್‌ಲೈನ್ ಜೋಡಿಸಿ ತರೀಕೆರೆಗೆ ತಾಲೂಕಿನ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಯಾವುದೇ ಕಾರಣಕ್ಕೂ ನಮ್ಮ ತಾಲೂಕಿನ ಕೆರೆಗಳು ತುಂಬುವ ಮೊದಲೇ ಬೇರೆ ತಾಲೂಕಿನ ಕೆರೆಗೆ ನೀರು ಹರಿಸಲು ಬಿಡುವುದಿಲ್ಲ ಎಂದು ಹೇಳಿದರು.

ಸಾರ್ವಜನಿಕರ ಅನುಕೂಲತೆಗಾಗಿ ಸರ್ಕಾರಿ ಕಚೇರಿಗಳು ಒಂದೇ ಸೂರಿನಲ್ಲಿ ಇರಬೇಕೆಂದು ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸಂಕೀರ್ಣದ ಕಾಮಗಾರಿ ಪ್ರಾರಂಭಿಸಲಾಗಿತ್ತು. ಈಗಿನ ಶಾಸಕರು ಅದನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಲೋಕಸಭೆ, ವಿಧಾನ ಪರಿಷತ್ ಚುನಾವಣೆಗಳನ್ನು ಪಕ್ಷದ ಎಲ್ಲ ಕಾರ್ಯಕರ್ತರು ಸೇರಿ ಪ್ರಾಮಾಣಿಕವಾಗಿ ಮಾಡಿದ್ದರು. ಆದರೂ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಕ್ಷೇತ್ರದ ಹಿನ್ನಡೆಯನ್ನು ಮುಚ್ಚಿಹಾಕಿಕೊಳ್ಳಲು ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಎರಡೂ ಪಕ್ಷಕ್ಕೆ ರಾಜಕೀಯ ಲಾಭವಾಗಿದೆ. ಈ ಮೈತ್ರಿಯಿಂದಲೇ ಡಾ.ಧನಂಜಯ ಸರ್ಜಿ ಮತ್ತು ನಾನು ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಅಭಿವೃದ್ಧಿ ಶೂನ್ಯವಾಗಿದ್ದು, ಈ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದರು.

ತಾಲೂಕು ಬಿಜೆಪಿ ಮುಖಂಡರಾದ ಸಂತೆಬೆನ್ನೂರು ಬಸವರಾಜ್, ತಾಪಂ ಮಾಜಿ ಅಧ್ಯಕ್ಷ ದೇವರಹಳ್ಳಿ ಎ.ಎಸ್. ಬಸವರಾಜಪ್ಪ, ಕೆ.ಸಿ. ಕೆಂಚಪ್ಪ, ಪಿ. ಲೋಹಿತ್, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕ ಮಲ್ಲೇಶಪ್ಪ, ಎಂ.ಯು. ಚನ್ನಬಸಪ್ಪ, ಚ.ಮ. ಗುರುಸಿದ್ದಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net