ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನ

29CBP1
Published on

ಚಿಕ್ಕಬಳ್ಳಾಪುರ: ನಗರದ ಸರ್ ಎಂ.ವಿ. ಒಳಾಂಗಣ ಕ್ರೀಡಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಕ್ರೀಡಾ ಸಂಘದಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.
ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಮಾತನಾಡಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಧ್ಯಾನಚಂದ್ 1932, 1936, 1938 ರಲ್ಲಿ ನಡೆದ ಒಲಂಪಿಕ್ಸ್ ಕ್ರೀಡೆಗಳಲ್ಲಿ ತಂಡದ ನಾಯಕತ್ವವನ್ನು ವಹಿಸಿ 3 ಬಾರಿ ದೇಶಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟ ಕೀರ್ತಿ ಹೊಂದಿದ್ದಾರೆ. ಜರ್ಮನಿಯ ವಿರುದ್ಧ 8-1 ಗೋಲುಗಳ ಅಂತರದಿಂದ ಜಯಭೇರಿ ಗಳಿಸಿದ್ದರಿಂದ ಆ ದೇಶದ ಪ್ರಧಾನಿ ಹಿಟ್ಲರ್ ಆಟಕ್ಕೆ ಬೆರಗಾಗಿ, ಇವರ ಸ್ಟಿಕ್‌ನಲ್ಲಿ ಕಬ್ಬಿಣದ ರಾಡ್ ಇರುವ ಅನುಮಾನದಲ್ಲಿ ಮುರಿದು ಪರಿಶೀಲಿಸಿದರು. ಬಳಿಕ ಕ್ರೀಡಾಂಗಣದಲ್ಲಿ ನೆರೆದಿದ್ದ 40 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಕ್ಷಮೆಯಾಚಿಸಿದರು. ಹಾಗೆಯೇ ಧ್ಯಾನಚಂದ್‌ಗೆ ದೇಶದ ಅತ್ಯುತ್ತಮ ಹುದ್ದೆ ಹಾಗೂ ಪದವಿ ಪುರಸ್ಕಾರ ಭರವಸೆ ನೀಡಿದ್ದು ಇದಕ್ಕೆ ಭಾರತದ ಹೆಮ್ಮೆಯ ಪುತ್ರ ನನ್ನ ಆಟ ಏನೇ ಇದ್ದರೂ ನನ್ನ ದೇಶ ಮಾತ್ರ ಸೀಮಿತ ಎಂಬುದಾಗಿ ಹೇಳಿ, ಪುಳುಕಿತಗೊಳಿಸಿದರು ಎಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಹನುಮಂತರೆಡ್ಡಿ ಮಾತನಾಡಿ, ಧ್ಯಾನಚಂದ್ ದೇಶದ ಕ್ರೀಡೆಗೆ ನೀಡಿದ ಕೊಡುಗೆ ಅಪಾರವಾದುದು. ಹಾಗೆಯೇ ಕ್ರೀಡಾಪಟು ನೀರಜ್ ಚೋಪ್ರಾರವರು ಭರ್ಜಿ ಎಸೆತದಲ್ಲಿ ವಿಶ್ವದಲ್ಲಿಯೇ ಮೊದಲಿಗರಾಗಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿರುವುದು ಸಂತಸದ ವಿಷಯ. ಇಂತಹ ಕ್ರೀಡಾಪಟುಗಳನ್ನು ಯುವ ಜನತೆ ಮಾದರಿಯಾಗಿ ಸ್ವೀಕರಿಸಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಹಾಕಿ ಕ್ರೀಡಾ ತರಬೇತಿದಾರ ದೇವರಾಜಮ್ಮ, ಕ್ರೀಡಾಪಟುಗಳಾದ ಜಯಂತಿ ಗ್ರಾಮ ನಾರಾಯಣಸ್ವಾಮಿ, ಶಶಿಕಲಾ, ಕಾವ್ಯ, ಓಂಪ್ರಿಯ, ಚಂದ್ರಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net