ರಾಷ್ಟ್ರ ಮಟ್ಟದಲ್ಲಿ ಹೆಸರಾದ ಕೃಷಿಧಾರ ಸೂರ್ಯ

23 vikram 1
Published on

ವಿಕ್ರಮ ನಾಡಿಗೇರ ಧಾರವಾಡ
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ರೈತರು ಸಮೃದ್ಧ ಬೆಳೆಗಳನ್ನು ಪಡೆಯುವುದು ಕಷ್ಟ ಸಾಧ್ಯವಾಗಿದೆ. ಸಮಯಕ್ಕೆ ಸರಿಯಾಗಿ ಬೆಳೆಗೆ ಬೇಕಾದಷ್ಟು ಮಳೆಯಾದರೆ ಉತ್ತಮ ಇಳುವರಿ ಸಿಗಲಿದೆ. ಆದರೆ ಒಂದೊಮ್ಮೆ ಬರಗಾಲ ಬಂದರೆ, ಇನ್ನೊಮ್ಮೆ ಅತೀವೃಷ್ಟಿ ಉಂಟಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಉತ್ತಮ ಇಳುವರಿ ನೀಡುವಂತಹ ತಳಿಗಳನ್ನು ಕೃಷಿ ವಿಶ್ವ ವಿದ್ಯಾಲಯ ಸಂಶೋಧನೆ ಮಾಡಿದೆ.
ಕೃಷಿ ವಿಶ್ವ ವಿದ್ಯಾಲಯ ಸಂಶೋಧನೆ ನಡೆಸಿ ನಿರ್ಬಂಧಿತ ನೀರಾವರಿ ಪ್ರದೇಶಕ್ಕೆ ಸೂಕ್ತವಾದ ಗೋಧಿ ತಳಿ ಸಂಶೋಧಿಸಿದ್ದಾರೆ. ಯುಎಎಸ್​ 478 (ಕೃಷಿಧಾರ ಸೂರ್ಯ) ಎಂಬ ತಳಿ ಇದಾಗಿದೆ. ಬರಗಾಲ ಎದುರಾದಾಗ ಈ ತಳಿ ಬಿತ್ತನೆ ಮಾಡಿ ಒಂದೆರಡು ಬಾರಿ ನೀರು ಹಾಯಿಸಿದರೆ ಸಾಕು ಪ್ರತಿ ಹೆಕ್ಟೇರ್​ಗೆ 30 ರಿಂದ 35 ಕ್ವಿಂಟಾಲ್​ ಉಳುವರಿ ಪಡೆಯಬಹುದಾಗಿದೆ. ಇದರಿಂದ ಬರಗಾಲದಿಂದ ಆದಾಯ ಇಲ್ಲ ಎಂದು ರೈತರು ಕೊರಗುವುದು ತಪ್ಪಲಿದೆ.
ಹೊಸ ತಳಿಯು 2023-24ರಲ್ಲಿ ಅಂತಾರಾಷ್ಟ್ರ ಮಟ್ಟದಲ್ಲಿ ಬಿಡುಗಡೆಯಾಗಿದ್ದು, ಮುಂದಿನ ವರ್ಷದಿಂದ ರೈತರಿಗೆ ಲಭ್ಯವಾಗಿದೆ. ಇದಲ್ಲದೆ ಇತ್ತೀಚೆಗೆ ಅಯೋಧ್ಯೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಸಮ್ಮೇಳನದಲ್ಲಿ ಒಳ್ಳೆಯ ಸಂಶೋಧನಾ ತಳಿ ಎಂಬ ಪ್ರಮಾಣಪತ್ರ ಸಹ ಪಡೆದಿದೆ.
ಭಾರತದ ದಕ್ಷಿಣ ವಲಯದ ನಿರ್ಬಂಧಿತ ನೀರಾವರಿ ಸ್ಥಿತಿಗಾಗಿ ಜೈವಿಕ ಬಲವರ್ಧಿತ ರವೆ ಗೋಧಿ ತಳಿಯಾಗಿ ಕೃಷಿಧಾರ ಸೂರ್ಯ ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾದ ಯುಎಎಸ್​ 446 ಮತ್ತು ಎನ್​ಐಡಿಡಬ್ಲೂ 1149ರ ಮೇಲೆ ಕ್ರಮವಾಗಿ ಕ್ರಮವಾಗಿ 60.4 ಮತ್ತು 26.2ರಷ್ಟು ಇಳುವರಿ ಶ್ರೇಷ್ಠತೆ ಹೊಂದಿದೆ.
ಈ ತಳಿಯನ್ನು ಸಕಾಲ ಸಮಯದಲ್ಲಿ ಅಂದರೆ ಅಕ್ಟೋಬರ್​ 25 ರಿಂದ ನವೆಂಬರ್​ 5ರ ವರೆಗೆ ಬಿತ್ತನೆಗೆ ಸೂಕ್ತವಾಗಿದೆ. ಪ್ರತಿ ಹೆಕ್ಟೇರಿಗೆ 30 ರಿಂದ 35 ಕ್ವಿಂಟಲ್​ ಇಳುವರಿ ನೀಡುವ ಈ ತಳಿಯು ದಪ್ಪವಾದ, ಗಟ್ಟಿಯಾದ, ಹೊಳಪುಳ್ಳ ಕಾಳುಗಳನ್ನು ಹೊಂದಿರುತ್ತದೆ. ಸಾಧಾರಣವಾಗಿ ಮಧ್ಯಮ ಎತ್ತರವಿದ್ದು 100 ದಿನಗಳವರೆಗೆ ಕಟಾವಿಗೆ ಬರುತ್ತದೆ.
ಈ ತಳಿಯ ಸಂಶೋಧನೆಯಲ್ಲಿ ಕೃವಿವಿ ವಿಜ್ಞಾನಿಗಳಾದ ಸುಮಾ ಬಿರಾದಾರ, ಎಸ್​.ಎ. ದೇಸಾಯಿ, ವಿ ರುದ್ರನಾಯ್ಕ, ಗುರುದತ್ತ ಹೆಗಡೆ, ಕುಮಾರ ಲಮಾಣಿ, ಉದಯ ರೆಡ್ಡಿ, ಆರ್​.ಆರ್​. ಹಂಚಿನಾಳ ಸೇರಿ ಇನ್ನೂ ಅನೇಕರು ಕಾರ್ಯ ನಿರ್ವಹಿಸಿದ್ದಾರೆ. ಈ ತಳಿ ಮುಂದಿನ ವರ್ಷದಿಂದ ಲಭ್ಯವಾಗಲಿದ್ದು, ರೈತರಿಗೆ ಯಾವ ರೀತಿ ಪ್ರಯೋಜನವಾಗಲಿದೆ ಎಂಬುದನ್ನು ಕಾದು ನೋಡಬೇಕು.
ಆರೋಗ್ಯಕ್ಕೂ ಉತ್ತಮ: ಯುಎಎಸ್​ 478 ತಳಿಯು ಜೈವಿಕ ಬಲವರ್ಧಿತ ತಳಿಯಾಗಿದ್ದು, ಹಳದಿ ವರ್ಣದ್ರವ್ಯ (7.7 ಪಿಪಿಎಂ) ಅಂಶದೊಂದಿಗೆ ಉತ್ತಮ ಪೌಷ್ಠಿಕಾಂಶದ ಗುಣಮಟ್ಟ ಹೊಂದಿರುತ್ತದೆ. ಈ ತಳಿಯು ಎಲೆ, ಕಾಂಡ ತುಕ್ಕು, ಬುಡಕೊಳೆ, ಕಾಡಿಗೆ ರೋಗಕ್ಕೆ ಪ್ರತಿರೋಧ ನೀಡುವ ಶಕ್ತಿ ಹೊಂದಿದೆ. ಅಪೌಷ್ಟಿಕತೆಯಿಂದ ಬಳುತ್ತಿರುವವರ ಜತೆಗೆ ಎಲ್ಲರ ಆರೋಗ್ಯಕ್ಕೂ ಉತ್ತಮ ಬೆಳೆಯಾಗಿದೆ ಎನ್ನುತ್ತಾರೆ ಸಂಶೋಧನಾ ವಿಜ್ಞಾನಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net