ಆಟದ ಮೈದಾನವಾಗಿ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತ ಬಳಗ ಪ್ರತಿಭಟನೆ

rastrabhakara balaga protest
ಡಿಸಿ ಕಚೇರಿ ಎದುರಿನ ಜಾಗವನ್ನು ಆಟದ ಮೈದಾನವನ್ನಾಗಿ ಉಳಿಸುವಂತೆ ಒತ್ತಾಯಿಸಿ ರಾಷ್ಟ್ರಭಕ್ತರ ಬಳಗ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ದಿಲೀಪ್ ಕುಮಾರ್ ಪಾಂಡೆ, ಕೆ.ಇ.ಕಾಂತೇಶ್, ಜೆ.ಆರ್.ವಾಸುದೇವ, ಕಾಚಿನಕಟ್ಟೆ ಸತ್ಯನಾರಾಯಣ, ಆಶಾ ಚನ್ನಬಸಪ್ಪ ಇತರರಿದ್ದರು.
Published on

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರಿನ ಜಾಗವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಪ್ರಕಾರ ಆಟದ ಮೈದಾನ ಅಥವಾ ತೆರೆದ ಜಾಗವನ್ನಾಗಿ ಉಳಿಸಬೇಕು ಎಂದು ಒತ್ತಾಯಿಸಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದ ಪದಾಧಿಕಾರಿಗಳು ಶನಿವಾರ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಮುಸ್ಲಿಮರು ಕಾಂಗ್ರೆಸ್ ಬೆಂಬಲದಿಂದ ಮೈದಾನ ಕಬಳಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಕೊಡುವುದಿಲ್ಲ. ಮೈದಾನಕ್ಕೆ ಪೊಲೀಸರು ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ನಾವೇ ಬೀದಿಗಿಳಿದು ಬ್ಯಾರಿಕೇಡ್ ಕಿತ್ತೆಸೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಲವು ದಶಕಗಳಿಂದ ಮೈದಾನವನ್ನು ಸಾರ್ವಜನಿಕರು ಬಳಸುತ್ತಿದ್ದಾರೆ. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಸೂಕ್ತ ನಿರ್ಧಾರವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜೆ.ಆರ್.ವಾಸುದೇವ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಇ.ವಿಶ್ವಾಸ್, ಎಸ್.ಜಿ.ಬಾಲು, ಕಾಚಿನಕಟ್ಟೆ ಸತ್ಯನಾರಾಯಣ, ಶ್ರೀಕಾಂತ್, ಮೋಹನ್ ಚಂದ್, ಆಶಾ ಚನ್ನಬಸಪ್ಪ ಮತ್ತಿತರರು ಇದ್ದರು.

ಎಸ್‌ಪಿ ವಿರುದ್ಧ ರೇಗಾಡಿದ ಕೆಎಸ್‌ಇ

ಪ್ರತಿಭಟನೆ ಬಳಿಕ ಮನವಿ ಸ್ವೀಕರಿಸಲು ಬಂದ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ವಿರುದ್ಧ ಈಶ್ವರಪ್ಪ ಬಹಿರಂಗವಾಗಿ ರೇಗಾಡಿದರು. ನಿಮ್ಮ ಇಲಾಖೆ ಬದುಕಿದೆಯೋ ಇಲ್ಲವೊ ಗೊತ್ತಿಲ್ಲ. ರೈಲ್ವೆ ಇಲಾಖೆ ಕಂಬಿ ತಂದು ಮೈದಾನಕ್ಕೆ ಬೇಲಿ ಹಾಕಿದ್ದರು. ಅವರನ್ನು ಈವರೆಗೂ ಬಂಧಿಸಿಲ್ಲ. ಮತ್ಯಾಕೆ ನೀವು ಎಸ್‌ಪಿ ಆಗಿದ್ದೀರಾ?, ನಾವೇನು ಇಲ್ಲಿ ದನ ಕಾಯೋಕೆ ಬಂದಿದ್ದೇವಾ ಎಂದು ತರಾಟೆಗೆ ತೆಗೆದುಕೊಂಡರು. ಹಿಂದೆ ನಾನು ಭಾಷಣ ಮಾಡಿದ್ದಕ್ಕೆ ಸುಮೋಟೊ ಪ್ರಕರಣ ದಾಖಲಿಸಿದ್ದೀರಿ. ಆಗ ಯಾರಾದರು ನಿಮಗೆ ದೂರು ನೀಡಿದ್ದರಾ?. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು. ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಗುಡುಗಿದರು. ಆಗ ಮನವಿ ನೀಡುವಂತೆ ಎಸ್‌ಪಿ ತಿಳಿಸಿದರು. ಇದರಿಂದ ಮತ್ತಷ್ಟು ಕೆರಳಿದ ಈಶ್ವರಪ್ಪ, ಮನವಿ ಕೊಡಬೇಕೆಂದು ನೀವು ಹೇಳಬೇಕಾ?, ನಿಮಗೆ ಕಣ್ಣು ಕಾಣುವುದಿಲ್ಲವೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net