

ಮಂಡ್ಯ: ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಹಾಗೂ ಆದರ್ಶಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳುವಂತೆ ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್-ನೆಹರು ಯುವ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಹಯೋಗದೊಂದಿಗೆ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನಾಚರಣೆ’ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ಜನ್ಮದಿನೋತ್ಸವದಂದು ಹೆಚ್ಚಿನ ಸಂಖ್ಯೆಯಲ್ಲಿ ಯುವ ಯುವತಿಯರು ಪಾಲ್ಗೊಂಡಿರುವುದು ಸಂತೋಷದ ವಿಷಯ ಎಂದರು.
ಯುವಜನತೆ ರಾಮಕೃಷ್ಣ ಆಶ್ರಮಕ್ಕೆ ತಿಂಗಳು ಅಥವಾ ವಾರಕ್ಕೊಮ್ಮೆಯಾದರೂ ಭೇಟಿ ನೀಡಿ, ಗುರುಗಳೊಂದಿಗೆ ಸಂವಾದ ನಡೆಸಿ ಜ್ಞಾನ ವೃದ್ಧಿಸಿಕೊಳ್ಳಿ, ಶ್ರದ್ಧೆ, ಭಕ್ತಿ, ಶಿಸ್ತು, ಪ್ರೀತಿಯನ್ನು ಅನುಸರಿಸಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ರಾಮಕೃಷ್ಣ ಆಶ್ರಮದ ಮಂಜು ಮಹಾರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ದೊಡ್ಡಬೆಲೆ ತೆರಬೇಕಾಗುತ್ತದೆ. ವಿವೇಕಾನಂದರ ಕನಸು ನನಸಾಗಬೇಕಾದರೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕು. ಯುವ ಜನತೆ ದಿನದಲ್ಲಿ ಕೆಲ ನಿಮಿಷಗಳಾದರೂ ವಿವೇಕಾನಂದರ ವಿಚಾರಗಳು ಅಧ್ಯಯನ ಮಾಡುವುದರೊಂದಿಗೆ ಅನುಸರಿಸಿ, ದೇಶದ ಭವಿಷ್ಯ ಉಜ್ವಲವಾಗುವಂತೆ ಮಾಡಬೇಕು ಎಂದರು.
ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಜಿ.ಪ್ರಕಾಶ್, ಅನಿಲ್ ಕುಮಾರ್, ಕುಮಾರ್ ಇದ್ದರು.