ಯುವಜನರಿಂದ ಸಮಾಜದ ಪರಿವರ್ತನೆ ಸಾಧ್ಯ: ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿಕೆ

National Youth Day mandya
Published on

ಮಂಡ್ಯ: ಯುವಜನರಲ್ಲಿ ಹೋರಾಟದ ಮನಸ್ಸು, ಧ್ಯೇಯ ಮತ್ತು ಕೆಚ್ಚು ಹೆಚ್ಚಿರುತ್ತದೆ. ಅವರ ಹೋರಾಟದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ಜನಪರ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ, ವಿವೇಕರತ್ನ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವಜನರ ಹೋರಾಟಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ ಎಂದು ನುಡಿದರು.

ಭಾರತದ ಇಡೀ ರಾಜಕೀಯ ಚಿತ್ರಣ ಬದಲಿಸಿದ ಜಯಪ್ರಕಾಶ್ ನಾರಾಯಣ್, ಗಾಂಧೀಜಿ, ಸ್ವಾಮಿ ವಿವೇಕಾನಂದರು ಯುವಜನರ ಮೂಲಕ ಚಳವಳಿಗೆ ಕರೆ ನೀಡಿ ಯಶಸ್ವಿಯಾದವರು. ಯುವಜನರ ಹೋರಾಟದಿಂದ ಸರ್ಕಾರಗಳು ಉರುಳಿ ಬಿದ್ದಿರುವ ಇತಿಹಾಸವಿದೆ. ಯವಶಕ್ತಿ ದೇಶದ ಮುಖ್ಯ ಶಕ್ತಿ ಎಂದರು.

ನಾವು ದೊಡ್ಡವರಾಗುತ್ತಾ ಹೋದಂತೆ ರಾಜಿಯಾಗುವ ಗುಣವಿರುತ್ತದೆ. ಅಂತೆಯೇ ಸಂಕಟಗಳು ಹೆಚ್ಚಿರುತ್ತದೆ. ಆದರೆ ಯುವಜನರಲ್ಲಿ ಹೋರಾಟಗಳಿಗೆ ಸ್ಪಂದಿಸುವ ಮನೋಭಾವವಿರುತ್ತದೆ. ಇಂತಹ ಯುವಜನರ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಸರ್ಕಾರ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ಕನ್ನಡ ಚಟುವಟಿಕೆಗಳನ್ನು ನಿರ್ವಹಿಸಲು ಎಷ್ಟೇ ಸಂಘಟನೆಗಳಿದ್ದರೂ ಸಾಲದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ ಪ್ರಚಾರ ಮಾಡುವ ದಿಕ್ಕಿನಲ್ಲಿ, ಮತ್ತಷ್ಟು ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ ಸಂಘಟನೆಗಳು ಕೆಲಸ ಮಾಡುವ ಜರೂರತ್ತಿದೆ ಎಂದರು.

ಸಾಹಿತಿ ಡಾ.ಲಿಂಗದಹಳ್ಳಿ ಹಾಲಪ್ಪ, ಪರಿಷತ್‌ನ ಗೌರವಾಧ್ಯಕ್ಷ ಡಾ.ಡಿ.ರವಿ, ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್, ಸಹ ಪ್ರಾಧ್ಯಾಪಕ ಡಾ.ಆರ್.ನಾಗಭೂಷಣ ಇದ್ದರು.

ಇದೇ ವೇಳೆ ಡಾ.ಎಸ್.ಶಿವರಾಜಪ್ಪ (ಸಾಹಿತ್ಯ), ಅಂಶಿ ಪ್ರಸನ್ನಕುಮಾರ್(ಮಾಧ್ಯಮ), ಎಂ.ಮಹದೇವಸ್ವಾಮಿ, ಡಾ.ಡಿ.ಕೆ. ರವಿಶಂಕರ್(ವಿಜ್ಞಾನ), ಡಾ.ಆರ್.ನಾಗಭೂಷಣ್(ಉನ್ನತ ಶಿಕ್ಷಣ), ಗುರುಬಸಪ್ಪ (ಆರಕ್ಷಕ), ಎನ್.ದೊಡ್ಡಯ್ಯ, ಆರ್.ನಾಗರಾಜು, ಮತ್ತು ಪಿ.ವೈ.ಶಾರದಾ (ಸಂಘಟನೆ), ಎಂ.ಸಿ.ಬೋರೇಗೌಡ, ಇ.ಕಂದವೇಲು ಮತ್ತು ಎ.ದೇವಮ್ಮಣಿ, ಡಿ.ಪಿ.ಚಿಕ್ಕಣ್ಣ(ಸಾಹಿತ್ಯ) ಅವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್. ದತ್ತೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಅಹಲ್ಯಾಭಾಯಿ ಹೋಳ್ಕರ್ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ಆರ್.ಪ್ರಭಾವತಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿದರು. ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಕಾರಂಜಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net