

ಮೈಸೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಮತ್ತು ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆ ವತಿಯಿಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯೋಗ ಒಲಂಪಿಯಾಡ್‌ನಲ್ಲಿ ಪಶ್ಚಿಮ ಬಂಗಾಳ ಪ್ರಾಬಲ್ಯ ಸಾಧಿಸಿತು.
9 ಮತ್ತು 10ನೇ ತರಗತಿ ಬಾಲಕಿಯರ ವಿಭಾಗದಲ್ಲಿ ಪಶ್ಚಿಮ ಬಂಗಾಳ ಪ್ರಥಮ, ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ದ್ವಿತೀಯ, ಕರ್ನಾಟಕ ತಂಡ ತೃತೀಯ, ತಮಿಳುನಾಡು ತಂಡ ನಾಲ್ಕನೇ ಬಹುಮಾನ ಪಡೆಯಿತು. ದಾವಣಗೆರೆಯ ಹರಿಹರದ ಎಂಆರ್‌ಬಿ ಪ್ರೌಢ ಶಾಲೆಯ ಕೆ.ವೈ. ಶೃತಿ, ಬೆಂಗಳೂರಿನ ನಾಯಂಡಹಳ್ಳಿಯ ಜಿಎಂಪಿಎಸ್ ಶಾಲೆಯ ಎಂ. ಸಂಧ್ಯಾ, ಹರಿಹರ ಕೊಂಡಜ್ಜಿಯ ಟಿ.ಆರ್. ಕಲ್ಲೇಶ್ವರಿ, ಬೆಂಗಳೂರಿನ ಕೆಂಚನಹಳ್ಳಿ ರಾಜೇಶ್ವರಿ ವಿದ್ಯಾಶಾಲೆಯ ಆರ್. ಅನುಷಾ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
9 ಮತ್ತು 10ನೇ ತರಗತಿ ಬಾಲಕರ ವಿಭಾಗದಲ್ಲಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಪ್ರಥಮ, ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ದ್ವಿತೀಯ, ಪಶ್ಚಿಮಬಂಗಾಳ ತೃತೀಯ, ತ್ರಿಪುರ ನಾಲ್ಕನೇ ಬಹುಮಾನ ಪಡೆದುಕೊಂಡಿತು.
6 ರಿಂದ 8ನೇ ತರಗತಿ ಬಾಲಕರ ವಿಭಾಗದಲ್ಲಿ ಪಶ್ಚಿಮ ಬಂಗಾಳ ಪ್ರಥಮ, ಸಿಐಎಸ್‌ಸಿಇ ದ್ವಿತೀಯ, ಚತ್ತೀಸ್‌ಗಢ ತೃತೀಯ, ದೆಹಲಿ ನಾಲ್ಕನೇ ಬಹುಮಾನ, ಬಾಲಕಿಯರ ವಿಭಾಗದಲ್ಲಿ ಪಶ್ಚಿಮ ಬಂಗಾಳ ಪ್ರಥಮ, ಸಿಐಎಸ್‌ಸಿಇ ದ್ವಿತೀಯ, ಹಿಮಾಚಲಪ್ರದೇಶ ತೃತೀಯ, ಜವಾಹರ ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ನಾಲ್ಕನೇ ಬಹುಮಾನ ಪಡೆಯಿತು.