ಕಳಪೆ ಸರಕುಗಳ ವಿರುದ್ಧ ಧ್ವನಿ ಎತ್ತಲು ಕಾನೂನಿನಲ್ಲಿ ಅವಕಾಶ

MBL
Published on

ಮುಳಬಾಗಿಲು: ಗ್ರಾಹಕರ ಹಿತರಕ್ಷಣೆ ಕಾಯಲು ಗ್ರಾಹಕರ ಕಾಯ್ದೆ ಅನುಷ್ಠಾನ ರೂಪಿಸಲಾಗಿದ್ದು, ಗ್ರಾಹಕರು ತಾವು ಖರೀದಿಸುವ ಸರಕು ಅಥವಾ ಸೇವೆಗಳಲ್ಲಿ ಯಾವುದೇ ರೀತಿಯ ಕಳಪೆ ಸರಕು, ಮೋಸದ ಸೇವೆ ಕಂಡುಬಂದರೆ ಅದರ ವಿರುದ್ಧ ಧ್ವನಿ ಎತ್ತಲು, ಸುರಕ್ಷೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜೆಎಂಎಫ್​ಸಿ ಹಿರಿಯ ಸಿವಿಲ್​ ನ್ಯಾಯಾಧೀಶ ಗೌಡ ಜಗಧೀಶ ರುದ್ರೆ ತಿಳಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳು ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ತಾಪಂ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ, ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದರು.

ವಿಶ್ವ ಗ್ರಾಹಕರ ದಿನಾಚರಣೆ ಮಾ.15 ರಂದು ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ 1986ರ ಡಿ.24ರಂದು ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆತು, ರಾಷ್ಟ್ರಪತಿಯ ಅಂಕಿತ ದೊರಕಿತ್ತು. ಈ ಕಾಯ್ದೆ ಅನುಷ್ಠಾನಗೊಳಿಸಿದ್ದು ದೇಶದ ಗ್ರಾಹಕ ಚಳವಳಿಯಲ್ಲಿ ಐತಿಹಾಸಿಕ ಮೈಲುಗಲ್ಲು ಎಂದು ಪರಿಗಣಿಸಲಾಗುತ್ತಿದೆ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್​.ಸತೀಶ್​ ಕುಮಾರ್​ ಮಾತನಾಡಿ, ಗ್ರಾಹಕ ನ್ಯಾಯಾಲಯ ಖರೀದಿಸಿದ ವಸ್ತುವಿನಲ್ಲಿ ದೋಷವಿದ್ದು, ಆ ವಸ್ತುವನ್ನು ವಾಪಸ್​ ತೆಗೆದುಕೊಂಡು ಹಣ ಹಿಂತಿರುಗಿಸಲು ಮಾರಾಟಗಾರ ನಿರಾಕರಿಸಿದ ಸಂದರ್ಭದಲ್ಲಿ ಗ್ರಾಹಕರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಬಹುದು ಎಂದರು.

ಗ್ರಾಪಂಗಳಿಂದ ನರೇಗಾ ಕಾಮಗಾರಿಗಳನ್ನು ಮಾಡುವ ಕೂಲಿ ಕಾರ್ಮಿಕರ ಕಾರ್ಡ್​ ಪಡೆಯುವ ಬಗ್ಗೆ, ಸರ್ಕಾರದ ವಿವಿಧ ಸೌಲಭ್ಯಗಳು ಕನಿಷ್ಠ 5 ಲಕ್ಷ ರೂ.ವರೆಗೂ ಪಡೆಯುವ ಬಗ್ಗೆ ತಾಪಂ ಸಹಾಯಕ ನಿರ್ದೇಶಕ ರವಿಚಂದ್ರ ಮಾಹಿತಿ ನೀಡಿದರು.

ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೀಡಿರುವ ಕಿಟ್​ಗಳನ್ನು ನ್ಯಾಯಾಧೀಶರು ಮತ್ತು ವಕೀಲರು ವಿತರಿಸಿದರು. ಕಾರ್ಮಿಕ ಇಲಾಖೆಯ ನಿರೀಕ್ಷಕಿ ಎನ್​.ಆಶಾರಾಣಿ, ವಕೀಲರ ಸಂಘದ ಉಪಾಧ್ಯಕ್ಷ ಸಿ.ವಿ. ಶ್ರೀನಿವಾಸಪ್ಪ, ಪ್ರಧಾನ ಕಾರ್ಯದರ್ಶಿ ಎಚ್​.ನಾಗೇಶ್​, ವಕೀಲ ಎಂ.ರಮೇಶ್​ ಇದ್ದರು.

ಗ್ರಾಹಕರ ಜವಾಬ್ದಾರಿಗಳು : ಹಕ್ಕುಗಳ ಬಗ್ಗೆ ಜಾಗೃತಿ, ಗುಣಮಟ್ಟದ ಅರಿವು, ದೂರು ನೀಡಲು ಸಿದ್ಧರಿರಬೇಕು, ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಬಾರದು, ನಗದು&ರಶೀದಿಗಾಗಿ ಬೇಡಿಕೆ, ಜಾಗೃತ ಬಳಕೆದಾರ ಸರಕುಗಳ ಆಯ್ಕೆ, ಗ್ರಾಹಕ ಸಂಘಟನೆ, ಪರಿಸರ ರಕ್ಷಣೆ, ಅವಸರದಲ್ಲಿ ಖರೀದಿಸಬಾರದು ಇತ್ಯಾದಿ ಜವಾಬ್ದಾರಿಗಳ ಬಗ್ಗೆ ಹಿರಿಯ ವಕೀಲ ಎಸ್​.ಬಶೀರ್​ ಅಹ್ಮದ್​ ಮಾಹಿತಿ ನೀಡಿದರು.

ಮುಳಬಾಗಿಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಜೆಎಂಎಫ್​ಸಿ ಹಿರಿಯ ಸಿವಿಲ್​ ನ್ಯಾಯಾಧೀಶ ಗೌಡ ಜಗಧೀಶ ರುದ್ರೆ ಉದ್ಘಾಟಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್​.ಸತೀಶ್​ ಕುಮಾರ್​, ಉಪಾಧ್ಯಕ್ಷ ಸಿ.ವಿ.ಶ್ರೀನಿವಾಸಪ್ಪ, ಪ್ರಧಾನ ಕಾರ್ಯದರ್ಶಿ ಎಚ್​.ನಾಗೇಶ್​, ವಕೀಲರಾದ ಎಸ್​.ಬಶೀರ್​ ಅಹ್ಮದ್​, ಎಂ.ರಮೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net