ಮಹಿಳೆಯರ ದೂರುಗಳಿಗೆ ತುರ್ತು ಸ್ಪಂದನೆ

shyamala
Published on

ಮಂಗಳೂರು: ರಾಜ್ಯದಲ್ಲಿ ಸೈಬರ್ ಕ್ರೈಂ ಹಾಗೂ ಗೃಹಸಂಬಂಧಿ ಹಿಂಸಾಚಾರಗಳಿಂದ ಮಹಿಳೆಯರಿಗೆ ರಕ್ಷಣೆ ನೀಡಬೇಕಿದ್ದು, ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಸೂಕ್ತ ಕ್ರಮದ ಭರವಸೆ ಸಿಕ್ಕಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದ್ದಾರೆ.

ಸಮಸ್ಯೆ ಬಗ್ಗೆ ದೂರು ಕೊಡಲು ಬಂದಾಗ ಪೊಲೀಸರಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂಬ ದೂರುಗಳಿವೆ. ಮಹಿಳೆಯರು ತಮಗಾಗುವ ಅನ್ಯಾಯವನ್ನು ಬಹಳಷ್ಟು ಬಾರಿ ಹೇಳಿಕೊಳ್ಳುವುದೇ ಇಲ್ಲ, ಹಾಗಿರುವಾಗ ದೂರು ನೀಡಿದರೂ ಸ್ಪಂದಿಸದಿರುವುದು ಸರಿಯಲ್ಲ. ಸೈಬರ್ ಅಪರಾಧಗಳು, ಗೃಹಹಿಂಸೆ ಬಗ್ಗೆ ಮಹಿಳೆಯರಿಂದ ಸಾಕಷ್ಟು ದೂರುಗಳು ಬಂದಿವೆ, ಈ ಎಲ್ಲ ವಿಚಾರಗಳನ್ನೂ ಡಿಜಿಪಿಯವರಲ್ಲಿ ಚರ್ಚೆ ಮಾಡಿದ್ದೇನೆ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕರ್ನಾಟಕ ಸೇರಿದಂತೆ 8 ರಾಜ್ಯಗಳ ಜವಾಬ್ದಾರಿ ಇದ್ದು, ಯಾವುದೇ ರಾಜ್ಯದಲ್ಲಿ ಪಕ್ಷಭೇದವಿಲ್ಲದೆ ಮಹಿಳೆಯರ ಮೇಲೆ ಆಗುವ ಅನ್ಯಾಯದ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಂಬಂಧಿಸಿದ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತದೆ. ಅವರಿಂದ ಕ್ರಮ ಜರುಗಿಸಿದ ಬಗ್ಗೆ ವರದಿ (ಎಟಿಆರ್) ಪಡೆದು ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ವಿವರಿಸಿದರು.

ನಗರಾಭಿವೃದ್ಧಿ ಕೋಶದ ನಿರ್ದೇಶಕಿ ಗಾಯತ್ರಿ ನಾಯಕ್, ಎಸ್ಪಿ ಕಚೇರಿಯ ಡಿವೈಎಸ್ಪಿ ದಿನಕರ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಹಾಜರಿದ್ದರು.

ಲೈಂಗಿಕ ಹಗರಣ ನೋಟಿಸ್

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಎರಡು ವರ್ಷ ಹಿಂದೆಯೇ ಆಕೆ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ. ಈಗ ವಿವಿಯಲ್ಲಿ ಸಭೆ ನಡೆಸಿದ್ದು, ಆರೋಪಿಗೆ ತಕ್ಷಣ ನೋಟಿಸ್ ನೀಡಿ ಒಂದು ವಾರದೊಳಗೆ ಉತ್ತರ ಪಡೆದು ಆಯೋಗಕ್ಕೆ ಕಳುಹಿಸುವಂತೆ ಕುಲಪತಿಯವರಿಗೆ ಸೂಚಿಸಲಾಗಿದೆ ಎಂದು ಶ್ಯಾಮಲಾ ತಿಳಿಸಿದರು.

ಎಲ್ಲ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಬೇಕಾದ ನೆರವು, ಸಾಂತ್ವನ, ಕಾನೂನು ಸಲಹೆ ನೀಡುವುದಕ್ಕೆ ಸಖಿ ಒನ್‌ಸ್ಟಾಪ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅನ್ಯಾಯಕ್ಕೊಳಗಾಗುವ ಅಥವಾ ಇತರ ಮಹಿಳೆಯರು ಪೂರ್ಣವಾಗಿ ಅದರ ಪ್ರಯೋಜನ ಪಡೆದುಕೊಳ್ಳಬೇಕು.

- ಶ್ಯಾಮಲಾ ಕುಂದರ್, ಸದಸ್ಯೆ, ಎನ್‌ಸಿಡಬ್ಲುೃ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net