ಆಮಿಷಕ್ಕೊಳಗಾಗದೇ ಮತದಾನ ಮಾಡಿ: ಸಿವಿಲ್ ನ್ಯಾಯಾಧೀಶೆ ಎ.ಎಂ.ನಳಿನಿಕುಮಾರಿ ಕಿವಿಮಾತು

25_01_Mdy_04(Voters Day)
Published on

ಮಂಡ್ಯ: ನಮ್ಮ ಸಂವಿಧಾನ ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕು ಕಲ್ಪಿಸಿದೆ. ಆದ್ದರಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಅರ್ಹರ ಮತದಾರರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಎ.ಎಂ.ನಳಿನಿಕುಮಾರಿ ಸಲಹೆ ನೀಡಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕರಲ್ಲಿ ನಾವು ಏಕೆ ಮತದಾನ ಮಾಡಬೇಕು?. ಮತದಾನ ಎಷ್ಟು ಮುಖ್ಯ ಎನ್ನುವುದೇ ತಿಳಿಯದಿರುವುದು ದುರಾದೃಷ್ಟಕರ ಸಂಗತಿ ಎಂದರು.

ಮತದಾರರು ಜಾಗೃತರಾಗಬೇಕು. ಪ್ರತಿಯೊಬ್ಬ ಅರ್ಹ ಮತದಾರರಿಗೆ ಮತದಾನದ ಹಕ್ಕು ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷ ವಾಕ್ಯದೊಂದಿಗೆ ದಿನವನ್ನು ಆಚರಿಸಲಾಗುತ್ತಿದೆ. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ತಪ್ಪದೇ ಯುವ ಮತದಾರರ ಮತದಾನ ಮಾಡಿ ಎಂದರು.

ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಚುನಾವಣೆಯಲ್ಲೂ ಶೇ.80 ರಿಂದ 85ರಷ್ಟು ಮತದಾನವಾಗುತ್ತಿದೆ. ಕಳೆದೊಂದು ವರ್ಷದಲ್ಲಿ 19 ರಿಂದ 20 ಸಾವಿರ ಯುವ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ. ಹೆಸರು ನೋಂದಾಯಿಸಲು ಇನ್ನೂ ಕಾಲಾವಕಾಶ ಇದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಚುನಾವಣೆ ಒಂದು ಪ್ರಮುಖ ಅಸ್ತ್ರ. ಅದ್ದರಿಂದ ಯುವಕರೆಲ್ಲರೂ ಮತದಾನ ಮಾಡಿ. ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಸಮಾಜ ಕಟ್ಟಿ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮಂಡ್ಯ ಉಪವಿಭಾಗಾಧಿಕಾರಿ ಎಸ್.ಎಚ್.ಕೀರ್ತನಾ, ತಹಸೀಲ್ದಾರ್ ಕುಂಞ ಅಹಮದ್, ಪೌರಾಯುಕ್ತ ಮಂಜುನಾಥ್ ಇದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಮತದಾರರ ಪ್ರತಿಜ್ಞಾವಿಧಿ ಭೋದಿಸಿದರು. 120 ವರ್ಷ ತುಂಬಿದ ರಾಧಾಬಾಯಿ ಹಾಗೂ ನಿಂಗಮ್ಮ ಅವರನ್ನು ಸನ್ಮಾನಿಸಲಾಯಿತು. ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net