ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ

hnl voter
Published on

ಹೊನ್ನಾಳಿ: ದೇಶದ ಅಭಿವೃದ್ಧಿ ಮತ್ತು ಭವಿಷ್ಯವು ಚುನಾವಣೆಗಳಲ್ಲಿ ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್. ದೇವದಾಸ್ ಹೇಳಿದರು.

ತಾಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ತಾಲೂಕು ಆಡಳಿತ, ತಾಲೂಕು ವಕೀಲರ ಸಂಘ, ಕಾನೂನು ಸೇವಾ ಸಮಿತಿ ಹಾಗೂ ಚುನಾವಣಾ ಸಾಕ್ಷರತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಹಿತದೃಷ್ಟಿಯಿಂದ ಸಂವಿಧಾನಬದ್ಧವಾಗಿ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಯುವಕರು ಬೇಡವಾದ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ ದೇಶದ ಅಭಿವೃದ್ಧಿ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ, ಜನಪ್ರತಿನಿಧಿ ಹೇಗಿರಬೇಕು ಹಾಗೂ ಅವರಿಗೆ ಏಕೆ ಮತ ಚಲಾಯಿಸಬೇಕು ಎಂಬುದರ ಬಗ್ಗೆ ತಿಳಿವಳಿಕೆ ಇರಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುಣ್ಯಕೋಟಿ ಮಾತನಾಡಿ, ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಕಾಲೇಜುಗಳಲ್ಲಿ ಮಾಡುವ ಉದ್ದೇಶವೇನೆಂದರೆ ನಿಮಗಾಗಿ ನೀವು ತಪ್ಪದೆ ಮತದಾನ ಮಾಡಬೇಕು ಮತ್ತು ನಿರ್ಲಕ್ಷ್ಯ ವಹಿಸಬಾರದು ಎಂದರು.

ತಹಸೀಲ್ದಾರ್ ಪಟ್ಟರಾಜಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ವಕೀಲ ಎಚ್. ಕರುಣಾಕರ್ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಟಾಕಪ್ಪ ಚೌವ್ಹಾಣ್ ಅಧ್ಯಕ್ಷತೆವಹಿಸಿದ್ದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಪಿ. ಜಯಪ್ಪ, ಉಪ ವಿಭಾಗಾಧಿಕಾರಿ ಅಭಿಷೇಕ್ ಮಾತನಾಡಿದರು.

ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ, ಸಿಪಿಐ ಅನಿಲ್​ಕುಮಾರ್, ತಾಪಂ ಇಒ ಎಂ.ಆರ್. ಪ್ರಕಾಶ್, ಬಿ.ಆರ್.ಸಿ. ತಿಪ್ಪೇಶಪ್ಪ, ವಕೀಲ ಚಂದ್ರಪ್ಪ ಮಡಿವಾಳ್, ಬಿ.ಎಂ. ಪುರುಷೋತ್ತಮ್ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net