ಪ್ರತಿಯೊಬ್ಬರೂ ಮತದಾನ ಚಲಾಯಿಸಿ

BLY-25-4
ಬಳ್ಳಾರಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಫುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಎಚ್.ಪುಷ್ಪಾಂಜಲಿ ದೇವಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
Published on

ಬಳ್ಳಾರಿ : ಮತದಾನವು ಭಾರತ ಸಂವಿಧಾನ ನೀಡಿರುವ ಹಕ್ಕಾಗಿದ್ದು, ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಎಚ್.ಪುಷ್ಪಾಂಜಲಿ ದೇವಿ ಅವರು ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಫುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಘೋಷವಾಕ್ಯದಡಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನವು ನಮ್ಮ ನಾಗರಿಕ ಜವಾಬ್ದಾರಿಯಾಗಿದೆ. ಗಣರಾಜ್ಯದ ಭವಿಷ್ಯ ಯುವ ಮತದಾರರ ಕೈಯಲ್ಲಿದೆ. ಯುವಕರು ಹಕ್ಕು ಭಾದ್ಯತೆಗಳನ್ನು ಅಳವಡಿಸಿಕೊಂಡು, ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೆ ಯೋಗ್ಯ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಿ ಮತ ಚಲಾಯಿಸಬೇಕು ಎಂದರು.
ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು, ಯಾರು ಕೂಡ ಮತದಾನದಿಂದ ವಿಮುಖರಾಗದೆ ಕಡ್ಡಾಯವಾಗಿ ಮತಚಲಾಯಿಸಬೇಕು ಎಂದರು.

ಪ್ರತಿ ವರ್ಷದ ಥೀಮ್ ಅನ್ನು ಮತದಾರಿಗೆ ಅರ್ಪಿಸಲಾಗುತ್ತದೆ. ಎನ್‌ವಿಡಿ 2024ರ ಥೀಮ್ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತ ಚಲಾಯಿಸುತ್ತೇನೆ ಎಂಬುದಾಗಿದೆ. 18 ವರ್ಷ ತುಂಬಿದ ಯುವಕ ಯುವತಿಯರು ಮತದಾನದ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನಿ ಮಾತನಾಡಿ, 2011ರ ಜ.25 ರಂದು ಮೊದಲ ಬಾರಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಹೆಚ್ಚು ಹೆಚ್ಚು ಯುವ ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಮತದಾನ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

18 ವರ್ಷ ತುಂಬಿದ ಹೊಸ ಮತದಾರರು ಮತದಾರರ ಪಟ್ಟಿ ತಮ್ಮ ಹೆಸರು ನೋಂದಾಯಿಸಲು ನಿರಾಸಕ್ತಿ ತೋರಬಾರದು. ದೇಶದ ಅಭಿವೃದ್ಧಿ ಚಿತ್ರಣದಲ್ಲಿ ಮತದಾನ ಅತ್ಯಮೂಲ್ಯವಾಗಿದೆ ಎಂದರು.

ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ಸಹಾಯಕ ಆಯುಕ್ತ ಹೇಮಂತ್.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ನವೀನ್ ಕುಮಾರ್, ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ತಹಸೀಲ್ದಾರ್ ಗುರುರಾಜ್ ಸೇರಿದಂತೆ ಚುನಾವಣೆ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ವೇಳೆ ಹೊಸ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net