

ರಬಕವಿ/ಬನಹಟ್ಟಿ: ನಗರದಲ್ಲಿ ಬುಧವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಕರ ಬನಹಟ್ಟಿ ಉಪನಗರ ಪಥಸಂಚಲನ ನಡೆಯಿತು.
ನಗರದ ಚೌಡಯ್ಯ ವೃತ್ತದಿಂದ ಆರಂಭಗೊಂಡ ಪಥಸಂಚಲನ ಮಾಳಿಂಗರಾಯ ದೇವಸ್ಥಾನ, ಶಂಕರಲಿಂಗ ದೇವಸ್ಥಾನ, ಮಂಗಳವಾರ ಪೇಟೆ, ಬಸ್ ನಿಲ್ದಾಣದ ರಸ್ತೆ, ಕಾಲೇಜು ರಸ್ತೆ, ಈಶ್ವರಲಿಂಗ ಮೈದಾನದಿಂದ ಕಾಡಸಿದ್ಧೇಶ್ವರ ದೇವಸ್ಥಾನ ಆವರಣ ತಲುಪಿತು.
ಕಂದು ಬಣ್ಣದ ಪ್ಯಾಂಟ್, ಬಿಳಿ ಅಂಗಿ, ಕರಿ ಬಣ್ಣದ ಟೋಪಿ ಧರಿಸಿ ಕೈಯಲ್ಲೊಂದು ದಂಡ ಹಿಡಿದಿದ್ದ ನೂರಾರು ಸ್ವಯಂ ಸೇವಕರು ಘೋಷ್ ವಾದ್ಯದೊಂದಿಗೆ ಕವಾಯತ್ತಿನಲ್ಲಿ ಸಾಗಿಬಂದರು. ಸಂಚಲನದ ಉದ್ದಕ್ಕೂ ಸ್ವಯಂ ಸೇವಕರು ತೋರಿದ ಶಿಸ್ತು ಹಾಗೂ ಹೆಜ್ಜೆ ಹಾಕುತ್ತಿದ್ದ ಗಾಂಭೀರ್ಯ ನೋಡುಗರ ಮನ ಸೆಳೆದು ರಾಷ್ಟ್ರಭಕ್ತಿ ಪ್ರಕಟಿಸುವಲ್ಲಿ ಯಶಸ್ವಿಯಾಯಿತು. ಘೋಷ್ ವಾದ್ಯ ಮೇಳ ಸಂಚಲನದ ಮೆರಗು ಹೆಚ್ಚಿಸಿತ್ತು.
ಶಂಖನಾದ, ಕೊಳಲು ವಾದನದೊಂದಿಗೆ ಡ್ರಮ್ ಬಾರಿಸುತ್ತ ಸಾಗುತ್ತಿದ್ದ ಸ್ವಯಂಸೇವಕರು ಹೊಸ ಕಳೆ ತಂದುಕೊಟ್ಟರು. ರಸ್ತೆಗಳ ಅಕ್ಕ-ಪಕ್ಕ, ತಿರುವು, ವೃತ್ತ ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಮಹಿಳೆಯರು ಪುಷ್ಪ ಸಮರ್ಪಿಸಿ ಭಾರತ ಮಾತಾಕೀ ಜೈ ಘೋಷಣೆ ಮೊಳಗಿಸಿದರು.
ಸಂಚಲನದ ಮಾರ್ಗಗಳು ತಳಿರು, ತೋರಣ, ರಂಗೋಲಿ ಚಿತ್ತಾರಗಳಿಂದ ಅಲಂಕಾರಗೊಂಡಿದ್ದವು. ಅಲ್ಲಲ್ಲಿ ಆಳೆತ್ತರದ ಕೇಸರಿ ಧ್ವಜ, ಕಮಾನು, ಬಂಟಿಗ್ಸ್ ಹಾಕಲಾಗಿತ್ತು. ಕೆಲವು ಮನೆಗಳ ಎದುರು ಭಾರತ ಮಾತೆಯ ಭಾವಚಿತ್ರ ಇರಿಸಿ ವಿಶೇಷ ಪೂಜೆ ಸಲ್ಲಿಸಿದ್ದು ಕಂಡು ಬಂದಿತು. ಸ್ವಯಂ ಸೇವಕನೊಬ್ಬ ಹಿಡಿದು ಸಾಗಿದ ಭಗವಾಧ್ವಜಕ್ಕೆ ಮಹಿಳೆಯರು ಆರತಿ ಸಲ್ಲಿಸಿ ಗೌರವಿಸಿದರು. ಹಿಂದುಪರ ಸಂಘಟನೆಗಳ ಸದಸ್ಯರು ಭಗವಾಧ್ವಜದ ಮೇಲೆ ಪುಷ್ಪವೃಷ್ಟಿ ಸುರಿಸಿದರು.
ನಗದರ ಅನೇಕ ಹಿರಿಯರು, ಮುಖಂಡರು, ಹಿಂದುಪರ ಸಂಘಟನೆ ಯುವಕರು ಭಾಗವಹಿಸಿದ್ದರು.
ಪಥಸಂಚಲನದ ಮಾರ್ಗದುದ್ದಕ್ಕೂ ಭಾರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.