ರಕ್ತದಾನದಿಂದ ಜೀವಗಳ ರಕ್ಷಣೆ: ರಂಗ ಪೈ

udp-31-blood 2
Published on

ಉಡುಪಿ: ರಕ್ತದಾನ ಮಾನವೀಯ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಮಾಡುವ ಕಾರ್ಯವಾಗಿದ್ದು, ಇದರಿಂದ ಪ್ರಾಣಾಪಾಯದಲ್ಲಿರುವ ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್​ ನಿರ್ದೇಶಕ ಟಿ. ರಂಗ ಪೈ ಹೇಳಿದರು.

ಮಂಗಳವಾರ ನಗರದ ಮಣಿಪಾಲ ಎಂ.ಐ.ಟಿ ಕ್ಯಾಂಪಸ್​ನ ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್​ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್​ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಲಯನ್ಸ್​ ಕ್ಲಬ್​, ಅಭಯಹಸ್ತ ಚಾರಿಟೇಬಲ್​ ಟ್ರಸ್ಟ್​ , ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ, ರಕ್ತದಾನ ಶಿಬಿರ ಮತ್ತು ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲಾ-ಕಾಲೇಜುಗಳಲ್ಲಿನ ಶಿಕ್ಷಣವು ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಶಿಕ್ಷಣದೊಂದಿಗೆ ಸಂಸ್ಕಾರವನ್ನು ಬೆಳೆಸಿ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಇದು ಸಾಧ್ಯ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮನ@ಪೂರ್ತಿ ತಮ್ಮ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಎಂ.ಎಸ್​.ಡಿ.ಸಿ ಅಧ್ಯಕ್ಷ ಡಾ. ರಾಧಾಕೃಷ್ಣ ಐತಾಳ್​ ಮಾತನಾಡಿ, ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ, ಸಮಾಜಸೇವೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಚಿಕ್ಕಂದಿನಿಂದಲೇ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಬೇಕು. ಒಂದು ಯೂನಿಟ್​ ರಕ್ತದಿಂದ 4 ಜನರ ಜೀವವನ್ನು ಉಳಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ 6 ಮಂದಿ ದಾನಿಗಳನ್ನು ಸನ್ಮಾನಿಸಲಾಯಿತು. ಕೆ.ಎಂ.ಸಿ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ಶಮ್ಮಿ ಶಾಸ್ತ್ರಿ, ಲಯನ್ಸ್​ ಕ್ಲಬ್​ ಅಧ್ಯಕ್ಷ ಧನುಷ್​ ಕೆ, ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್​ನ ಪ್ರಾಂಶುಪಾಲ ಪ್ರೊ. ಎ.ಎನ್​. ಕಾಂತರಾಜ್​, ಅಭಯಹಸ್ತ ಚಾರಿಟೇಬಲ್​ ಟ್ರಸ್ಟ್​ ಅಧ್ಯಕ್ಷ ಸತೀಶ್​ ಸಾಲ್ಯಾನ್​ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೃಥ್ವಿ ಸ್ವಾಗತಿಸಿ, ಮಹಾಬಲೇಶ್​ ನಿರೂಪಿಸಿ, ಕಿಶನ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net