

ವಿಜಯವಾಣಿ ಸುದ್ದಿಜಾಲ ನಂದಗುಡಿ.
ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ಪಿಡಿಒ ಕೆಂಪಣ್ಣ ಹೇಳಿದರು.
ನಂದಗುಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹದಲ್ಲಿ ಮಾತನಾಡಿದರು.
ದೇಶದಲ್ಲಿ ವಿವಿಧ ಜಾತಿ, ಧರ್ಮಗಳನ್ನು ಅನುಸರಿಸುತ್ತಿದ್ದು, ಎಲ್ಲರ ನಡುವೆ ಐಕ್ಯತೆ, ಸೌಹಾರ್ದತೆಯನ್ನು ಕಾಯ್ದುಕೊಂಡು ಹೋಗಬೇಕಾಗಿರುವುದು ಅವಶ್ಯ. 12ನೇ ಶತಮಾನದಲ್ಲಿಯೇ ಬಸವಣ್ಣ ಬೋಧಿಸಿದ ಧರ್ಮ ನಿರಪೇಕ್ಷತೆ ಪಾಲಿಸಬೇಕು, ನಮ್ಮ ಸಂವಿಧಾನದಲ್ಲಿಯೂ ವಿಶೇಷ ಆಧ್ಯತೆ ಮೇರೆಗೆ ಅದನ್ನು ಅಳವಡಿಸಲಾಗಿದ್ದು, ಸಂವಿಧಾನಕ್ಕೆ ಎಲ್ಲರೂ ಗೌರವಕೊಡಬೇಕು. ಮಾನವೀಯ ಮೌಲ್ಯಗಳನ್ನು ಉಳಿಸಬೇಕಾದರೆ ಮೊದಲು ಮಾನವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗ್ರಾಪಂ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ನಾಗೇಶ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಮುಂದುವರೆದಿರುವ ಪ್ರಸ್ತುತ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಸಮಾಜದ ಶಾಂತಿಯನ್ನು ಕದಡುವದರಿಂದ ಅಭಿವೃದ್ಧಿಯ ವೇಗ ಕುಂಟಿತವಾಗುತ್ತದೆ. ಶೋಷಿತ ವರ್ಗಗಳ ಕುರಿತು ಹಾಗೂ ದುರ್ಬಲವರ್ಗದವರ ಏಳಿಗೆಗಾಗಿ, ಪರಿಸರ ರಕ್ಷಣೆಗಾಗಿ ಹೆಚ್ಚು ಮಹತ್ವ ಕೊಡಬೇಕಿದೆ. ಯಾವುದೇ ಧರ್ಮಗಳು ಅಹಿಂಸೆ ಬೋಧಿಸುವದಿಲ್ಲ. ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅವಶ್ಯ ಇದ್ದು, ಸಮಾಜ ಸುಧಾರಕರ, ಸ್ವಾಂತಂತ್ರ ಹೋರಾಟಗಾರರ, ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.