ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗಿ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಕರೆ, ರಾಷ್ಟ್ರೀಯ ಐಕ್ಯತಾ ಸಪ್ತಾಹ

kavi sammelana
Published on

ಬೆಂಗಳೂರು ಗ್ರಾಮಾಂತರ: ಭವ್ಯ ಭಾರತ ನಿರ್ಮಾಣ ಕಾರ್ಯದಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಲಿದ್ದು, ಈ ನಿಟ್ಟಿನಲ್ಲಿ ಯುವ ಸಮುದಾಯ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್ ಕರೆ ನೀಡಿದರು.

ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಕವಿ ಸಮ್ಮೇಳನದಲ್ಲಿ ಮಾತನಾಡಿದರು.

ಭಾಷೆ, ನೆಲ, ಸಂಸ್ಕೃತಿ ವಿಷಯದಲ್ಲಿ ಭಾರತೀಯರಿಗೆ ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡುವ ಶಕ್ತಿಯಿದೆ. ಸಂವಿಧಾನಕ್ಕೆ ಗೌರವ ಸಲ್ಲಿಸುವ ಜತೆಗೆ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನತೆ ಮುಂದಡಿ ಇಡಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಜಿಲ್ಲಾ ಕವಿ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೊಂದು ಉತ್ತಮ ಪ್ರಯತ್ನವಾಗಿದ್ದು, ಕಾರ್ಯಕ್ರಮ ಎಲ್ಲ ಕಡೆಗಳಲ್ಲೂ ಪಸರಿಸಬೇಕು ಎಂದು ಹೇಳಿದರು.

ಹನಿ, ಹನಿ ಕೂಡಿದರೆ ಹಳ್ಳ ಎಂಬಂತೆ ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಆನ್‌ಲೈನ್ ಮೂಲಕ ಕವಿ ಸಮ್ಮೇಳನ ಕಾರ್ಯಕ್ರಮವನ್ನು ಚಿತ್ರೀಕರಿಸುವಂತೆ ಸೂಚಿಸಿದರು.

ಈ ಕಾರ್ಯಕ್ರಮ ಜಿಲ್ಲೆಗೆ, ಜಿಲ್ಲಾಡಳಿತಕ್ಕೆ ಸೀಮಿತವಾಗದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಯುವಜನತೆಗೆ ತಲುಪುವಂತಾಗಬೇಕು ಎಂದರು.

ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ದೇಶ ಎಷ್ಟೇ ಮುಂದುವರಿದರೂ ಜಾತೀಯತೆ ಎಂಬ ವಿಷಗಿಡ ನಿರ್ಮೂಲನೆಯಾಗದಿರುವುದು ವಿಷಾದದ ಸಂಗತಿ ಎಂದರು. ಎಲ್ಲರೂ ಸರ್ವ ಸಮಾನರೆಂಬುದೇ ಐಕ್ಯತಾ ಸಪ್ತಾಹದ ಉದ್ದೇಶವಾಗಿದೆ. ಇದು ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದರು.

ನೆಲಮಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಕರಮೂರ್ತಿ, ದೇವನಹಳ್ಳಿ ತಾಲೂಕು ಕನ್ನಡ ಪರಿಷತ್ತಿನ ಅಧ್ಯಕ್ಷ ನಂಜೇಗೌಡರು, ಹೊಸಕೋಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬೆಟ್ಟಳ್ಳಿ ಗೋಪಿನಾಥ್ ಮತ್ತಿತರರು ಹಾಜರಿದ್ದರು.

ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಕವಿ ಸಮ್ಮೇಳನವನ್ನು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ಮಂಜುನಾಥ ಬಿ.ಆರಾಧ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net