

ಮೈಸೂರು: ಸಂವಿಧಾನದ ಮಹತ್ವ, ದೇಶದ ಯೋಧರ ಕೆಚ್ಚೆದೆಯ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡದ ವೈಭವ, ದಸರಾ ಮಹೋತ್ಸವದ ಆಕರ್ಷಣೆಗೆ ಯುವ ಸಂಭ್ರಮ ಸಾಕ್ಷಿಯಾಯಿತು.
ದಸರಾ ಮಹೋತ್ಸವ ಸಮಿತಿಯಿಂದ ಮಾನಸಗಂಗೋತ್ರಿಯ ಬಯಲುರಂಗಮಂದಿರದಲ್ಲಿ ಆಯೋಜಿಸಿರುವ ಕಾಲೇಜು ವಿದ್ಯಾರ್ಥಿಗಳ ನೃತ್ಯ ಸಂಭ್ರಮದಲ್ಲಿ ಮೂರನೇ ದಿನವಾದ ಶುಕ್ರವಾರ ನಾನಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು.
ಸಾಂಸ್ಕೃತಿಕ ಹಬ್ಬ ಯುವ ಜನತೆಯಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನದೊಂದಿಗೆ ದೇಶ ಭಕ್ತಿಯ ಕಿಚ್ಚನ್ನು ಹಚ್ಚುವಂತೆ ಮಾಡಿತು.
ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯ ಸ್ಮರಣೆ, ಕನ್ನಡ ನಾಡು ನುಡಿ, ರಾಷ್ಟ್ರೀಯ ಭಾವೈಕ್ಯತೆಯ ಜಪ, ಭಾರತೀಯ ಯೋಧರ ಸ್ಮರಣೆಯೊಂದಿಗೆ ಮೊಳಗಿದ ಜೈ ಜವಾನ್, ಜೈ ಕಿಸಾನ್ ಘೋಷಣೆಗಳು ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿತು.
ಬೆಂಗಳೂರು ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತ ನೃತ್ಯಕ್ಕೆ ಹೆಜ್ಜೆ ಹಾಕಿದರೆ, ಮೈಸೂರು ಹಿನಕಲ್ನ ಮೈಸೂರು ರೂರಲ್ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಮೈಸೂರು ರಾಜರ ಕೊಡುಗೆಯ ಬಗ್ಗೆ ತಿಳಿಸಿದರು.
ಹುಣಸೂರು ಟ್ಯಾಲೆಂಟ್ ಎಜುಕೇಷನ್ ಟ್ರಸ್ಟ್ ವಿದ್ಯಾರ್ಥಿಗಳು ನೃತ್ಯ, ಮಡಿಕೇರಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಬಿಂಬಿಸುವ ಗೀತೆಗಳಿಗೆ ಹೆಜ್ಜೆ ಹಾಕಿದರು.
ಅಯೋಧ್ಯೆ ಶ್ರೀರಾಮ ಶಿಲ್ಪಿ ಮೈಸೂರಿನ ಹೆಮ್ಮೆಯ ಅರುಣ್ ಯೋಗಿರಾಜ್, ಮೈಸೂರು ದಸರಾ ವೈಭವ ಅಂದು ಇಂದು, ದೇಶ ಕಾಯುವ ಯೋಧರ ಬಗ್ಗೆ, ಸರ್ಕಾರದ ಗ್ಯಾರಂಟಿ ಯೋಜನೆಗಳು... ಹೀಗೆ ನಾನಾ ಕಾಲೇಜು ತಂಡಗಳು ಕನ್ನಡ ನಾಡು ನುಡಿ ಯೊಂದಿಗೆ ಕರ್ನಾಟಕದ ಜಾನಪದ ವೈವಿಧ್ಯತೆ ಮತ್ತು ಪರಂಪರೆಯನ್ನು ಬಿಂಬಿಸುವ ನೃತ್ಯಗಳನ್ನು ಮಾಡುವ ಮೂಲಕ ಗಮನ ಸೆಳೆದವು. ಕಾರ್ಯಕ್ರಮದಲ್ಲಿ 59 ತಂಡ ನೃತ್ಯ ಪ್ರದರ್ಶನ ಮಾಡಲಾಯಿತು.