

ಮಂಡ್ಯ: ಜಿಲ್ಲೆಯಲ್ಲಿ 41 ಗ್ರಾಮ ಪಂಚಾಯಿತಿ ಕ್ಷಯರೋಗ ಮುಕ್ತಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಮಿಮ್ಸ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆಲ್ಲ ಕ್ಷಯರೋಗಕ್ಕೆ ಸಾರ್ವಜನಿಕರು ಹೆದರುತ್ತಿದ್ದರು. ದಿನಕ್ಕೆ ಸರಿ ಸುಮಾರು 9000 ಜನ ಕ್ಷಯ ರೋಗಕ್ಕೆ ಬಲಿಯಾಗುತ್ತಿದ್ದರೆಂದು ಅಂಕಿ ಅಂಶಗಳು ಹೇಳುತ್ತವೆ ಎಂದರು.
ಅಂದಿನಿಂದ ಇಂದಿನವರೆಗೂ ಆರೋಗ್ಯ ಇಲಾಖೆ ಕ್ಷಯ ರೋಗ ನಿರ್ಮೂಲನೆ ಮಾಡಲು ಹೋರಾಟ ನಡೆಸುತ್ತಲೆ ಇದೆ. ಕ್ಷಯ ರೋಗವನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಿಸಿ ಆರೋಗ್ಯ ಇಲಾಖೆ ಯಶಸ್ವಿಯೆಡೆಗೆ ದಾಫುಗಾಲು ಇಡುತ್ತಿದೆ. ರೋಗದ ವಿರುದ್ಧ ಹೋರಾಡಲು ಸಹಕಾರ ನೀಡುತ್ತಿರುವ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಜಿಲ್ಲಾಡಳಿತಕ್ಕೆ ಸರ್ಕಾರದ ಪರವಾಗಿ ಅಭಿನಂದನೆ ತಿಳಿಸಿದರು.
ಹೃದಯ ವೈಶಾಲ್ಯ ಯೋಜನೆಯಡಿ 49 ಇ.ಸಿ.ಜಿ ಯಂತ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡುವ ಮೂಲಕ ಜಿಲ್ಲಾಧಿಕಾರಿ ಡಾ.ಕುಮಾರ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರು ತಂಗಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಇದರ ಕುರಿತು ಎಲ್ಲ ಶಾಸಕರೊಡನೆ ಚರ್ಚಿಸಿ ಸಿಎಸ್‌ಆರ್ ಫಂಡ್ ಮೂಲಕ 40 ಲಕ್ಷ ರೂ ವೆಚ್ಚದಲ್ಲಿ 100 ಜನ ತಂಗಲು ಮತ್ತು ಸ್ನಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಶೀಘ್ರವೇ ಅದರ ಉದ್ಘಾಟನೆ ನೆರವೇರಲಿದೆ ಎಂದು ವಿವರಿಸಿದರು.
ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಮಾತನಾಡಿ, ಕ್ಷಯರೋಗದ ಕುರಿತು ಜಿಲ್ಲೆಯಲ್ಲಿ ಸುಮಾರು 2 ಲಕ್ಷದ 41 ಸಾವಿರಕ್ಕೂ ಹೆಚ್ಚಿನ ಜನರಿಗೆ ತಪಾಸಣೆ ನಡೆಸಲಾಗಿದೆ. ಅದರಲ್ಲಿ 20,434 ಸಂಶಯಾಸ್ಪದ ರೋಗಿಗಳು ಕಂಡುಬಂದಿದ್ದಾರೆ. ಅವರಲ್ಲಿ 8,843 ಉಚಿತ ಎಕ್ಸರೆ ಪರೀಕ್ಷೆ ಹಾಗೂ ಇನ್ನುಳಿದವರಿಗೆ ಕಫಾ ಸೇರಿದಂತೆ ಅಗತ್ಯ ಪರೀಕ್ಷೆ ಮಾಡಲಾಗಿದೆ. 2017ಕ್ಕೆ ಹೋಲಿಸಿದರೆ ಇಂದು ಕ್ಷಯ ರೋಗ ಪ್ರಕರಣಗಳು ಶೇ.20ರಷ್ಟು ಕಡಿತಗೊಂಡಿದೆ. ಇದಕ್ಕಾಗಿ ಭಾರತ ಸರ್ಕಾರ 2022ನೇ ಸಾಲಿನಲ್ಲಿ ಜಿಲ್ಲೆಗೆ ಕಂಚಿನ ಪದಕವನ್ನು ನೀಡಿ ಗೌರವಿಸಲಾಗಿದೆ. 2023ನೇ ಸಾಲಿನಲ್ಲಿ ಕರ್ನಾಟಕದ 10 ಜಿಲ್ಲೆಯಲ್ಲಿ ಪರಿಶೋಧನೆ ನಡೆಸಿದಾಗ ಶೇ.40ರಷ್ಟು ಕ್ಷಯರೋಗ ನಿರ್ಮೂಲನೆ ಆಗಿದ್ದು, ಭಾರತ ಸರ್ಕಾರದಿಂದ ಕರ್ನಾಟಕಕ್ಕೆ ರಜತ ಪದಕ ನೀಡಿ ಗೌರವಿಸಿದೆ ಎಂದು ಹೇಳಿದರು.
ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಇತರರಿದ್ದರು.