

ಮೈಸೂರು: ‘ಅಭಿಯಂತರರು’ ಸಂಸ್ಥೆಯ 31ನೇ ವಾರ್ಷಿಕೋತ್ಸವದ ಅಂಗವಾಗಿ ಫೆ.28ರಿಂದ ಮಾರ್ಚ್ 3ರವರೆಗೆ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ರಾಷ್ಟ್ರೀಯ ರಂಗ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಸುರೇಶ್‌ಬಾಬು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ರಂಗ ಉತ್ಸವ ಹಮ್ಮಿಕೊಳ್ಳಲಾಗಿದೆ. ಮುಂಬೈ, ಪಾಂಡಿಚೆರಿ ಮತ್ತು ಬೆಂಗಳೂರಿನಿಂದ ರಂಗ ತಂಡಗಳು ಆಗಮಿಸಲಿದ್ದು, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯ 5 ಅತ್ಯುತ್ತಮ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.28ರಂದು ಸಂಜೆ 6.30ಕ್ಕೆ ನಾಟಕಕಾರ ಕೆ. ವೈ.ನಾರಾಯಣಸಾಮಿ ರಂಗ ಉತ್ಸವಕ್ಕೆ ಚಾಲನೆ ನೀಡುವರು. ಸಾಹಿತಿ ಎಸ್.ಜಿ. ಸಿರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸಾಮಿ, ಸಹಾಯಕ ನಿರ್ದೇಶಕ ಡಾ.ಸುದರ್ಶನ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಂಜೆ 7ಕ್ಕೆ ಪುದುಚೇರಿಯ ಆದಿಶಕ್ತಿ ತಂಡದಿಂದ ‘ಭೂಮಿ’ ಇಂಗ್ಲಿಷ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಫೆ.29 ರಂದು ಸಂಜೆ 7ಕ್ಕೆ ಬೆಂಗಳೂರಿನ ಸುಸ್ಥಿರ ಪ್ರತಿಷ್ಠಾನ ತಂಡದಿಂದ ಸರಸ ವಿರಸ ಸಮರಸ’ ಕನ್ನಡ ನಾಟಕ, ಮಾ.1ರಂದು ಸಂಜೆ 7ಕ್ಕೆ ಬೆಂಗಳೂರಿನ ಧೀಮಹಿ ಸೆಂಟರ್ ಆಫ್ ಆರ್ಟ್ಸ್ ತಂಡದಿಂದ ‘ನಂ.36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ, ಮಾ.2ರಂದು ಸಂಜೆ 7ಕ್ಕೆ ಬೆಂಗಳೂರಿನ ಆಕ್ಟ್ ರಿಯಾಕ್ಟ್ ತಂಡದಿಂದ ‘ಅಜ್ಞಾತನೊಬ್ಬನ ಆತ್ಮ ಚರಿತ್ರೆ’ ಕನ್ನಡ ನಾಟಕ, ಫೆ.3ರಂದು ಸಂಜೆ 7ಕ್ಕೆ ಮುಂಬೈಯ ಅಭಿನಯ ಕಲ್ಯಾಣ್ ತಂಡದಿಂದ ‘ಕಾಕಶಿ’ ಹಿಂದಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿಗಳಾದ ರಾಜಶೇಖರ ಕದಂಬ, ಮುಸ್ತಾಫಾಖಾನ್, ಎನ್.ಎಸ್.ಮಹದೇವಸಾಮಿ ಇದ್ದರು.