ಎಲ್ಲರಲ್ಲೂ ಮೂಡಬೇಕು ದೇಶ ನಮ್ಮದೆಂಬ ಹೆಮ್ಮೆ : ಅಣ್ಣಾಮಲೈ ಕೆ. ಆಶಯ

1
Published on

ಬಂಟ್ವಾಳ: ಭಾರತ ನನ್ನ ದೇಶ ಎಂಬ ಭಾವನೆ, ಹೆಮ್ಮೆ ಎಲ್ಲರಲ್ಲಿಯೂ ಮೂಡಬೇಕು. ಯುವಜನತೆ ಶಿವಾಜಿ ಮಹಾರಾಜರಂತಹ ಶ್ರೇಷ್ಠ ವ್ಯಕ್ತಿಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶಸೇವೆ ಮಾಡಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೆ. ಹೇಳಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ವತಿಯಿಂದ ಶ್ರೀರಾಮ ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಪ್ರಚಲಿತ ಭಾರತ: ಸತ್ಯ-ಮಿಥ್ಯೆ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಳವಡಿಸಿರುವ ಗುರುಕುಲ ಪದ್ಧತಿ ಶ್ಲಾಘನೀಯ. ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮಾಡಿರುವ ಪ್ರಯತ್ನದಲ್ಲಿ ಸಫಲರಾಗಿದ್ದು, ರಾಷ್ಟ್ರೀಯ ವಿಚಾರಧಾರೆಗಳ ಶಿಕ್ಷಣ ಪಡೆದ ವಿದ್ಯಾರ್ಥಿ ಸಮುದಾಯವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಕೇಂದ್ರದ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ ಸಭಾಧ್ಯಕ್ಷತೆ ವಹಿಸಿದ್ದರು. ಸಂಚಾಲಕ ವಸಂತ ಮಾಧವ ವೇದಿಕೆಯಲ್ಲಿದ್ದರು.

ಎರಡನೇ ಅವಧಿಯಲ್ಲಿ ಬೆಂಗಳೂರಿನ ಇತಿಹಾಸ ಸಂಶೋಧಕ ಡಾ.ವಿಕ್ರಮ್ ಸಂಪತ್, ಕಲಿತ ಪಾಠಗಳು ಅರಿಯದ ನೋಟಗಳು ಬಗ್ಗೆ ವಿಚಾರ ಮಂಡಿಸಿದರು. ಮೂರನೇ ಅವಧಿಯಲ್ಲಿ ಬೆಂಗಳೂರಿನ ವಕೀಲೆ ಕ್ಷಮಾ ನರಗುಂದ ನರೇಟಿವ್(ಕಥನ/ಅಖ್ಯಾನ) ವಿಚಾರ ಮಂಡಿಸಿದರು. ಸಮಾರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇಸ್ರೇಲ್ ನಾವರಿಯದ ಸತ್ಯಗಳು ವಿಷಯ ಮಂಡಿಸಿದರು.

ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಂಧ್ಯಾಲಕ್ಷ್ಮೀ ವಂದಿಸಿ, ಪುನೀತಾ ಕಾರ್ಯಕ್ರಮ ನಿರ್ವಹಿಸಿದರು. ಸ್ವಾತಿಲಕ್ಷ್ಮೀ ವಂದಿಸಿದರು.

ಶಿಶುಮಂದಿರಕ್ಕೆ ಭೇಟಿ

ಕಾರ್ಯಕ್ರಮಕ್ಕೆ ಮೊದಲು ಅಣ್ಣಾಮಲೈ ಹಾಗೂ ಡಾ.ವಿಕ್ರಮ್ ಸಂಪತ್, ಕ್ಷಮಾ ನರಗುಂದ, ಶ್ರೀಕಾಂತ್ ಶೆಟ್ಟಿ ಮತ್ತಿತರರು ಶಿಶುಮಂದಿರ, ಪ್ರಾಥಮಿಕ ಶಾಲಾ ತರಗತಿಗಳಿಗೆ ಭೇಟಿ ನೀಡಿದರು. ಡಾ.ಪ್ರಭಾಕರ ಭಟ್ ಮತ್ತಿತರರು ಅಲ್ಲಿನ ಚಟುವಟಿಕೆಯ ಬಗ್ಗೆ ಪೂರಕ ಮಾಹಿತಿ ನೀಡಿದರು.

ಪಠ್ಯ ಪುಸ್ತಕಗಳಲ್ಲಿ ಹಾಗೂ ಕೆಲವೊಂದು ಮಾಧ್ಯಮಗಳಲ್ಲಿ ರಾಷ್ಟ್ರೀಯ ವಿಚಾರಗಳನ್ನು ಮರೆಮಾಚುವ ಕೆಲಸಗಳು ಆಗಿವೆ. ಇಂತಹ ಸಂದರ್ಭ ಯಾವುದು ಸತ್ಯ? ಯಾವುದು ಮಿಥ್ಯೆ? ಎಂಬುದರ ಬಗ್ಗೆ ಪರಿಪೂರ್ಣವಾಗಿ ತಿಳಿಸುವ ಪ್ರಯತ್ನವನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಕೆಲವು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದೆ. ಡಾ.ಪ್ರಭಾಕರ್ ಭಟ್ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net