

ಹುಬ್ಬಳ್ಳಿ : ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಸಪ್ತಾಹ ನಗರದ ಕೆಎಂಸಿಆರ್ಐ ಹಾಗೂ ಐಎಂಎ ಸಭಾಂಗಣದಲ್ಲಿ ಜೂ. 8 ರಿಂದ 15ರವರೆಗೆ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷೆ ಡಾ. ಶಿಲ್ಪಾ ಕುಚ್ಚನ್ನವರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 8ರಂದು ಬೆಳಗ್ಗೆ 9 ಗಂಟೆಗೆ ಕೆಎಂಸಿಆರ್ಐನಿಂದ ತೋಳನಕೆರೆವರೆಗೆ ರ್ಯಾಲಿ, 9ರಂದು ಕೆಎಂಸಿಆರ್ಐನಲ್ಲಿ ರಕ್ತದಾನ ಶಿಬಿರ, 10ರಂದು ವಿಹಾನ್ ಆಸ್ಪತ್ರೆಯಲ್ಲಿ ಸರ್ಜನ್ಸ್ಗಳಿಗೆ ಉಚಿತ ಹೃದ್ರೋಗ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಸಪ್ತಾಹದ ಹಿನ್ನೆಲೆಯಲ್ಲಿ ಇಡೀ ವಾರ ವಿವಿಧ ಆಸ್ಪತ್ರೆಗಳಲ್ಲಿ ಅಗತ್ಯ ಇರುವ ಒಬ್ಬರಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದರು.
15ರಂದು ಐಎಂಎ ಸಭಾಂಗಣದಲ್ಲಿ ಸರ್ಜನ್ಸ್ ಡೇ ಕಾರ್ಯಕ್ರಮ ಆಯೋಜಿಸಲಾಗಿದೆ. ಹುಬ್ಬಳ್ಳಿ-ಧಾರವಾಡದ ಐವರು ಹಿರಿಯ ಸರ್ಜನ್ಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಡಾ. ಈಶ್ವರ ಹೊಸಮನಿ, ಡಾ. ಸಂಧ್ಯಾ ಎನ್., ಡಾ. ರಶ್ಮಿ ಮಾನೆ ಸುದ್ದಿಗೋಷ್ಠಿಯಲ್ಲಿ ಇದ್ದರು.